ನವದೆಹಲಿ: ಲೋಕಸಭಾ ಚುನಾವಣೆಗೆ ಸಂಕಲ್ಪ ಪತ್ರ ಎಂಬ ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಪ್ರಧಾನಿ ಮೋದಿ, ಸೌರಮಾನ ಯುಗಾದಿ ವಿಶು ಆಚರಿಸುತ್ತಿರುವ ದೇಶದ ವಿವಿಧ ರಾಜ್ಯಗಳ ಜನರಿಗೆ ಶುಭಾಶಯ ತಿಳಿಸಿದರು. ಇಂದು ತುಂಬಾ ಒಳ್ಳೆಯ ದಿನವಾಗಿದೆ. ಇಂದು ದೇಶದ ಹಲವು ರಾಜ್ಯಗಳಲ್ಲಿ ಹೊಸ ವರ್ಷದ ಸಂಭ್ರಮವಿದೆ. ಜೊತೆಗೆ ಡಾ ಬಿ ಆರ್ ಅಂಬೇಡ್ಕರ್ ಜಯಂತಿ ಸಹ ಇದೆ. ಇಂದು ನಾವು ವಿಕ್ಷಿತ್ ಭಾರತ ಸಂಕಲ್ಪ ಪತ್ರವನ್ನ ದೇಶದ ಜನರ ಮುಂದಿಟ್ಟಿದ್ದೇವೆ ಎಂದರು.

ಪ್ರಣಾಳಿಕೆ ತಯಾರು ಮಾಡಿದಕ್ಕೆ ರಾಜನಾಥ್ ಸಿಂಗ್ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಪ್ರಧಾನಿ, ಬಿಜೆಪಿ ಪ್ರಣಾಳಿಕೆಗಾಗಿ ಇಡೀ ದೇಶ ಕಾಯುತ್ತಿತ್ತು. ಯುವ, ನಾರಿಶಕ್ತಿ, ರೈತ ಮತ್ತು ಬಡವರೇ ನಮ್ಮ ಪ್ರಣಾಳಿಕೆಯ ಬುನಾದಿ, ಗುಣಮಟ್ಟ ಅವಕಾಶಗಳ ಸೃಷ್ಠಿಯನ್ನು ನಮ್ಮ ಪ್ರಣಾಳಿಕೆಯಲ್ಲಿ ಜೋಡಿಸಲಾಗಿದೆ ಎಂದರು.

ಉಚಿತ ಪಡಿತರ ಯೋಜನೆ ಮುಂದಿನ 5 ವರ್ಷ ಜಾರಿಯಲ್ಲಿರುತ್ತೆ. 70 ವರ್ಷ ದಾಟಿದ ಎಲ್ಲರನ್ನೂ ಆಯುಷ್ಮಾನ್ ಭಾರತ್ ಯೋಜನೆ ಅಡಿ ತರಲಾಗುತ್ತದೆ. ಇದರಲ್ಲಿ 5 ಲಕ್ಷ ರೂಪಾಯಿ ವಿಮೆ ಇರುತ್ತದೆ. ದೇಶದಲ್ಲಿ 3 ಕೋಟಿ ಮನೆ ನಿರ್ಮಾಣ ಮಾಡಲಾಗುತ್ತದೆ. ಪಿ ಎಂ ಸೂರ್ಯಗರ್ ಉಚಿತ ಯೋಜನೆ ಜಾರಿಗೆ ತರಲಾಗಿದೆ. ಮುದ್ರಾ ಯೋಜನೆಯ ಸಾಲದ ಮೊತ್ತವನ್ನು 20 ಲಕ್ಷ ರೂಪಾಯಿವರೆಗೆ ಹೆಚ್ಚಿಸಲಾಗಿದೆ. ಸ್ವನಿಧಿ ಯೋಜನೆ, ಇದರ ಅನ್ವಯ ಬ್ಯಾಂಕ್ ನಲ್ಲಿ ಗ್ಯಾರಂಟಿ ಇಲ್ಲದೆ ಸಾಲ ಸೌಲಭ್ಯ ಸಿಗಲಿದೆ ಬೀದಿ ಬದಿ ವ್ಯಾಪಾರಿಗಳಿಗೆ 50 ಸಾವಿರಕ್ಕೂ ಹೆಚ್ಚು ಸಾಲ ಸೌಲಭ್ಯ ಸಿಗಲಿದೆ. ಆಯುಷ್ಮಾನ್ ಯೋಜನೆಯನ್ನು ತೃತೀಯ ಲಿಂಗಿಗಳಿಗೂ ವಿಸ್ತರಿಸಲಾಗಿದೆ. ಲಕ್ಪತಿದೀದಿ: 3 ಕೋಟಿ ಲಕ್ಪತಿ ದೀದಿಯರನ್ನು ಸೃಷ್ಟಿ ಮಾಡುವ ಉದ್ದೇಶ ಇದೆ (3 ಕೋಟಿ ಮಹಿಳೆಯರನ್ನು ಲಕ್ಷಾಧಿಪತಿಯರನ್ನಾಗಿಸುವ ಗುರಿ)

ಕಿಸಾನ್ ಕ್ರೆಡಿಟ್ ಯೋಜನೆಯಲ್ಲಿ ಪಶುಪಾಲಕರು, ಮೀನುಗಾರರನ್ನು ಸೇರಿಸಲಾಗುತ್ತದೆ ಹಾಗೆಯೇ ಅನ್ನ ಭಂಡಾರ ಯೋಜನೆಯಡಿ ಶ್ರೀ ಅನ್ನ ಯೋಜನೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಇದರಿಂದ 2 ಕೋಟಿ ಸಣ್ಣ ರೈತರಿಗೆ ವಿಶೇಷ ಲಾಭ ಇದೆ. ಹಾಗೆಯೇ ತರಕಾರಿ ಮೀನುಗಾರಿಕೆ ಕ್ಷೇತ್ರದಲ್ಲೂ ವ್ಯಾಪಕ ಸುಧಾರಣೆ, ನ್ಯಾನೋ ಯೂರಿಯಾ ಯೋಜನೆಯನ್ನು ವಿಸ್ತರಿಸಲಾಗಿದೆ. ಭಾರತವನ್ನು ಫುಡ್ ಫ್ರೊಸೆಸಿಂಗ್ ಹಬ್ ಆಗಿ ನಿರ್ಮಿಸಲಾಗುವುದು. ಹಾಗೆಯೇ ಸಂತ ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರಗಳ ನಿರ್ಮಾಣ, ಈ ಮೂಲಕ ಹೊಯ್ಸಳರು ಸೇರಿ ಪಾರಂಪರಿಕ ಸ್ಥಳಗಳನ್ನು ವಿಶ್ವದ ಟೂರಿಸಂ ಜೊತೆಗೆ ಜೋಡಣೆ.

ಹೋ ಸ್ಟೇ ಯೋಜನೆಯ ಮೂಲಕ ವಿಶೇಷವಾಗಿ ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಒತ್ತು. ಡಿಜಿಟಲ್ ಮೂಲ ಸೌಕರ್ಯದ ಮೂಲಕ ಫಿಜಿಕಲ್ ಹಾಗೂ ಸೋಶಿಯಲ್ ಮೂಲ ಸೌಕರ್ಯಕ್ಕೆ ಒತ್ತು. ವಂದೇ ಭಾರತ್ ರೈಲು ಸೇವೆ ವಿಸ್ತರಣೆ, ದೇಶದ ದಕ್ಷಿಣ, ಉತ್ತರ ಪೂರ್ವ ಭಾಗಗಳಲ್ಲಿ ಬುಲೆಟ್ ಟ್ರೈನ್ ಯೋಜನೆ ವಿಸ್ತರಣೆ ಮಾಡಲಾಗುವುದು ಎಂದು ಪ್ರಧಾನಿ ಮೋದಿ ಸಂಕಲ್ಪ ಪತ್ರ ಬಿಡುಗಡೆಗೊಳಿಸಿ ಹೇಳಿದರು.

ವಿಶ್ವಸಂಸ್ಥೆಯ ಕಾಯಂ ಸದಸ್ಯ ರಾಷ್ಟ್ರಗಳ ಸಾಲಿಗೆ ಭಾರತವನ್ನೂ ಸೇರಿಸಲು ಶ್ರಮಿಸಲಾಗುವುದು ಎಂಬುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ತಿಳಿಸಿದೆ. “ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರವಾಗಿ ಭಾರತ ಹೊರಹೊಮ್ಮಲು ಹೆಚ್ಚಿನ ಆದ್ಯತೆ ನೀಡಲಾಗುವುದು” ಎಂದು ಪ್ರಣಾಳಿಕೆ ತಿಳಿಸಿದೆ.