ಪಣಜಿ: ದಕ್ಷಿಣ ಗೋವಾ ಕ್ಷೇತ್ರದ ಲೋಕಸಭಾ ಬಿಜೆಪಿ ಅಭ್ಯರ್ಥಿ ಪಲ್ಲವಿ ಡೆಂಪೋ ಸುಮಾರು 1400 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ.
ತನ್ನ 119 ಪುಟಗಳ ಅಫಿಡವಿಟ್ನಲ್ಲಿ, ಡೆಂಪೊ ತನ್ನ ಪತಿ ಶ್ರೀನಿವಾಸ ಜೊತೆಗೆ ತನ್ನ ನಿವ್ವಳ ಮೌಲ್ಯ ಸುಮಾರು 1,400 ಕೋಟಿ ರೂಪಾಯಿ ಎಂದು ಬಹಿರಂಗಪಡಿಸಿದ್ದಾರೆ. ಅವರು 255.4 ಕೋಟಿ ಮೌಲ್ಯದ ಚರ ಆಸ್ತಿ ಮತ್ತು 28.2 ಕೋಟಿ ಮೌಲ್ಯದ ಸ್ಥಿರ ಆಸ್ತಿ ಹೊಂದಿದ್ದಾರೆ. ಪತಿ ಶ್ರೀನಿವಾಸ ಒಡೆತನದ ಆಸ್ತಿ ಮೌಲ್ಯ 994.8 ಕೋಟಿ ರೂ.ಗಳಾಗಿದೆ. ಶ್ರೀನಿವಾಸ ಡೆಂಪೊ ಅವರು ಡೆಂಪೊ ಗುಂಪಿನ ಅಧ್ಯಕ್ಷರಾಗಿದ್ದಾರೆ, ಇದು ಫುಟ್ಬಾಲ್, ರಿಯಲ್ ಎಸ್ಟೇಟ್, ಶಿಕ್ಷಣ ಮತ್ತು ಗಣಿಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದೆ.
ದಂಪತಿ ಗೋವಾ ಮತ್ತು ದೇಶದ ಇತರ ಭಾಗಗಳಲ್ಲಿ ಆಸ್ತಿ ಹೊಂದಿದ್ದಾರೆ. ದುಬೈನ ಸವನ್ನಾದಲ್ಲಿ ಜಂಟಿಯಾಗಿ ಅಪಾರ್ಟ್ಮೆಂಟ್ ಹೊಂದಿದ್ದಾರೆ, ಇದರ ಮಾರುಕಟ್ಟೆ ಮೌಲ್ಯ ಸುಮಾರು 2.5 ಕೋಟಿ ರೂ.ಗಳಾಗಿದೆ. ಇವರಿಬ್ಬರು ಲಂಡನ್ನಲ್ಲಿ 10 ಕೋಟಿ ರೂಪಾಯಿ ಮೌಲ್ಯದ ಅಪಾರ್ಟ್ಮೆಂಟ್ ಹೊಂದಿದ್ದಾರೆ ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿದೆ.
ಪಲ್ಲವಿ ಅವರ ಬಳಿ 5.7 ಕೋಟಿ ಮೌಲ್ಯದ ಚಿನ್ನವಿದೆ. 49 ವರ್ಷದ ಅವರು ಪುಣೆ ವಿಶ್ವವಿದ್ಯಾಲಯದ ಎಂಐಟಿಯಿಂದ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪಲ್ಲವಿ ಅವರು 2022-23ನೇ ಹಣಕಾಸು ವರ್ಷಕ್ಕೆ 10 ಕೋಟಿ ರೂಪಾಯಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದಾರೆ. ಮೇ 7 ರಂದು ಮೂರನೇ ಹಂತದಲ್ಲಿ ಚುನಾವಣೆ ನಡೆಯಲಿರುವ ದಕ್ಷಿಣ ಗೋವಾದಲ್ಲಿ ಪಲ್ಲವಿ ಕಾಂಗ್ರೆಸ್ನ ವಿರಿಯಾಟೊ ಫೆರ್ನಾಂಡಿಸ್ ವಿರುದ್ಧ ಸ್ಪರ್ಧಿಸಿದ್ದಾರೆ.