ಬೆಳಗಾವಿ: ಲೋಕಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಟಿವಿ ಚಾನೆಲ್, ದಿನಪತ್ರಿಕೆಗಳು ಮಾತ್ರವಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ನೀಡುವ ಜಾಹೀರಾತುಗಳು ಮತ್ತು ಪ್ರಚಾರಕಾರ್ಯಗಳ ಖರ್ಚುವೆಚ್ಚದ ಮೇಲೆಯೂ ನಿಗಾ ವಹಿಸಬೇಕು ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ, ಹಿರಿಯ ಐ.ಎ.ಎಸ್ ಅಧಿಕಾರಿ ಎಂ.ಕೆ.ಅರವಿಂದ ಕುಮಾರ್ ಅವರು ನಿರ್ದೇಶನ ನೀಡಿದರು.
ಚುನಾವಣೆ ಹಿನ್ನೆಲೆಯಲ್ಲಿ ವಾರ್ತಾಭವನದಲ್ಲಿ ಸ್ಥಾಪಿಸಲಾಗಿರುವ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು(ಎಂಸಿಎಂಸಿ) ಘಟಕಕ್ಕೆ ಭಾನುವಾರ(ಏ.21) ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದರು.
ಇತ್ತೀಚೆಗೆ ದೇಶದಾದ್ಯಂತ ಸಾಮಾಜಿಕ ಜಾಲತಾಣಗಳ ಬಳಕೆದಾರರ ಮೇಲೆ ಯೂಟ್ಯೂಬರ್ ಗಳ ಪ್ರಭಾವ ಹೆಚ್ಚಾಗಿದ್ದು, ಇಂತಹ ಇನ್ ಫ್ಲುಯೆನ್ಸರ್ ಗಳನ್ನು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ತಮ್ಮ ಚುನಾವಣಾ ಪ್ರಚಾರಕ್ಕೆ ಬಳಸುಕೊಳ್ಳುತ್ತಿದ್ದಾರೆ. ಇಂತಹ ಸ್ಥಳೀಯ ಇನ್ ಫ್ಲುಯೆನ್ಸರ್ ಗಳ ಮೇಲೆ ನಿಗಾ ವಹಿಸಬೇಕು. ಚುನಾವಣಾ ಆಯೋಗದ ಮಾರ್ಗಸೂಚಿಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಚುನಾವಣಾ ಪ್ರಚಾರದ ಖರ್ಚು-ವೆಚ್ಚಗಳ ಮೇಲೆ ನಿಗಾ ವಹಿಸುವುದರ ಜತೆಗೆ ಮಾದರಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆಯೂ ನಿರಂತರ ನಿಗಾ ವಹಿಸಬೇಕು. ಇಂತಹ ವಿಷಯಗಳ ಬಗ್ಗೆ ಚುನಾವಣಾಧಿಕಾರಿಗಳು ಹಾಗೂ ಸಂಬಂಧಿಸಿದ ನೋಡಲ್ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಎಂ.ಕೆ.ಅರವಿಂದಕುಮಾರ್ ಹೇಳಿದರು.
ಸಮೂಹ ಮಾಧ್ಯಮ-ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ:
ಎಲ್ಲ ಟಿವಿ ಚಾನೆಲ್ ಗಳು ಮತ್ತು ಬೆಳಗಾವಿ ಜಿಲ್ಲೆಯಲ್ಲಿರುವ ಕನ್ನಡ, ಇಂಗ್ಲಿಷ್ ಮರಾಠಿ ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ಚುನಾವಣಾ ಸಂಬಂಧಿತ ಜಾಹೀರಾತು ಹಾಗೂ ಸುದ್ದಿಗಳ ಮೇಲೆ ನಿಗಾವಹಿಸಲಾಗುತ್ತಿದೆ. ನೀತಿಸಂಹಿತೆ ಉಲ್ಲಂಘನೆ ಕಂಡುಬಂದರೆ ತಕ್ಷಣವೇ ಜಿಲ್ಲಾ ಚುನಾವಣಾಧಿಕಾರಿಗಳು, ಎಂಸಿಸಿ ನೋಡಲ್ ಅಧಿಕಾರಿಗಳು ಹಾಗೂ ವೆಚ್ಚ ನೋಡಲ್ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು ಎಂಸಿಎಂಸಿ ನೋಡಲ್ ಅಧಿಕಾರಿ ಗುರುನಾಥ ಕಡಬೂರ ವಿವರಿಸಿದರು.
ಇದಲ್ಲದೇ ಪ್ರತ್ಯೇಕ ತಂಡವು ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ ವಹಿಸಿದ್ದು, ಅಭ್ಯರ್ಥಿಗಳ ಪ್ರಚಾರ ಮತ್ತು ಖರ್ಚುವೆಚ್ಚವನ್ನು ಪರಿಶೀಲಿಸುತ್ತಿದೆ ಎಂದರು.
ತಹಶೀಲ್ದಾರ ಸಿದ್ದರಾಯ ಭೋಸಗಿ, ಮಾಧ್ಯಮ ಘಟಕದ ಉಸ್ತುವಾರಿಗಳಾದ ಝಡ್.ಜಿ.ಸಯ್ಯದ್, ವಿ.ಎಂ.ಕಂಗ್ರಾಳಕರ, ಶ್ರೀಮತಿ ಎಂ.ಎಂ.ಪಾಟೀಲ, ಎಸ್.ಎಸ್.ಘೋರ್ಪಡೆ, ಎ.ಬಿ.ಕಾಮಣ್ಣವರ, ಎಂ.ಪಿ.ನಿಚ್ಚಣಕಿ, ಮಹಾಂತೇಶ ಪತ್ತಾರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸ್ಟ್ರಾಂಗ್ ರೂಮ್ ಪರಿಶೀಲನೆ:
ಬೆಳಗಾವಿ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ, ಹಿರಿಯ ಐ.ಎ.ಎಸ್ ಅಧಿಕಾರಿ ಎಂ.ಕೆ.ಅರವಿಂದ ಕುಮಾರ್ ಅವರು, ಇದಕ್ಕೂ ಮುಂಚೆ ಆರ್.ಪಿ.ಡಿ. ಮಹಾವಿದ್ಯಾಲಯದಲ್ಲಿ ಸ್ಥಾಪಿಸಲಾಗಿರುವ ಸ್ಟ್ರಾಂಗ್ ರೂಮ್ ಪರಿಶೀಲಿಸಿದರು.
ಇದಾದ ಬಳಿಕ ವನಿತಾ ಮಹಾವಿದ್ಯಾಲಯದಲ್ಲಿರುವ ಮಸ್ಟರಿಂಗ್-ಡಿಮಸ್ಟರಿಂಗ್ ಕೇಂದ್ರ, ಸ್ಟ್ರಾಂಗ್ ರೂಮ್ ವೀಕ್ಷಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಮೊದಲನೇ ಮಹಡಿಯಲ್ಲಿರುವ ಏಕಗವಾಕ್ಷಿ ಕೇಂದ್ರ ಸುವಿಧಾ ಕೇಂದ್ರಕ್ಕೂ ಭೇಟಿ ನೀಡಿ, ಚುನಾವಣಾ ಪ್ರಚಾರ ಕಾರ್ಯಗಳಿಗೆ ಅನುಮತಿ ನೀಡುವ ಏಕಗವಾಕ್ಷಿ ವ್ಯವಸ್ಥೆಯನ್ನು ಪರಿಶೀಲಿಸಿದರು.