ಬೆಂಗಳೂರು: ಹುಬ್ಬಳ್ಳಿಯ ನೇಹಾ ಹಿರೇಮಠ ಅವರ ಹತ್ಯೆ ಮತ್ತು ಹಿಂದೂಗಳ ಮೇಲಿನ ಮುಸ್ಲಿಂ ಮತಾಂಧರ ನಿರಂತರ ದಾಳಿಯ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯಾದ್ಯಂತ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್‌’ ಮೂಲಕ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿರುವ ಅವರು, ನಮ್ಮ ಆದ್ಯತೆ ಏನಿದ್ದರೂ ಧ್ಯೇಯಕ್ಕೇ ಹೊರತು ಅಧಿಕಾರಕ್ಕಲ್ಲ, ಚುನಾವಣಾ ಕಾರ್ಯವನ್ನು ಬದಿಗಿರಿಸಿ ನಾಳೆ(ಸೋಮವಾರ) ಎಲ್ಲರೂ ಬೀದಿಗಿಳಿದು ಹೋರಾಟ ನಡೆಸಬೇಕು.
ಚುನಾವಣೆಯ ಗಡಿಬಿಡಿಯಲ್ಲಿ ನಾವು ಹೆಣ್ಣು ಮಕ್ಕಳ ಮೇಲಿನ ಕೌರ್ಯ, ದೈವ ನಿಂದನೆ ಹಾಗೂ ರಾಷ್ಟ್ರ ಭಕ್ತರ ಮೇಲಿನ ಹಲ್ಲೆಗಳನ್ನು ನಿರ್ಲಕ್ಷಿಸಿ ಕೂರಲಾಗದು. ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಅತ್ಯಂತ ಅಮಾನುಷ ಘಟನೆ. ಇದನ್ನು ಪೊಲೀಸರು ಎಲ್ಲಾ ಮಗ್ಗಲುಗಳಿಂದಲೂ ತನಿಖೆ ನಡೆಸಬೇಕಾಗಿರುವುದು ಸಾರ್ವಜನಿಕರ ಆಗ್ರಹವಾಗಿದೆ. ಆದರೆ, ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಕೆಲ ಸಚಿವರು ಘಟನೆಯ ಕುರಿತು ಲಘುವಾಗಿ ಪ್ರತಿಕ್ರಿಯಿಸಿರುವುದು ನೋಡಿದರೆ ದುಷ್ಟರಿಗೆ ಹಾಗೂ ಹಿಂದೂ ಧರ್ಮದ ಕಂಟಕರಿಗೆ ಸರ್ಕಾರದ ಕೃಪಾಪೋಷಣೆಯ ಉದಾರತೆ ದೊರೆತಿರುವುದು ಸ್ಪಷ್ಟವಾಗಿದೆ.

ಅಲ್ಪಸಂಖ್ಯಾತರ ಓಲೈಕೆಯೇ ಈ ಸರ್ಕಾರದ ಆದ್ಯತೆ ಆಗಿದೆ. ಭಾರತೀಯ ಜನತಾ ಪಕ್ಷ ಸಿದ್ಧಾಂತಕ್ಕಾಗಿ ಜನ್ಮ ತಾಳಿದ ಪಕ್ಷ. ನಮ್ಮ ಆದ್ಯತೆ ಏನಿದ್ದರೂ ಧ್ಯೇಯಕ್ಕೇ ಹೊರತು ಅಧಿಕಾರಕ್ಕಲ್ಲ ಎಂದು ಅವರು ತಿಳಿಸಿದ್ದಾರೆ.