ಉಡುಪಿ : ಪೂರ್ಣಪ್ರಜ್ಞ ಕಾಲೇಜು (ಸ್ವಾಯತ್ತ) ಉಡುಪಿ ಮತ್ತು ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ಹೆಬ್ರಿ ಕಾಲೇಜಿನ ಸಭಾಂಗಣದಲ್ಲಿ ತುಳುನಾಡಿನ ವಿಶಿಷ್ಟ ಶಾಸನಗಳ ಕುರಿತು ಉಪನ್ಯಾಸ ಹಾಗೂ ನಂತರ ಪಾರಂಪರಿಕ ತಾಣಗಳ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಉಪನ್ಯಾಸ ಸಂದರ್ಭದಲ್ಲಿ ಶಾಸನಗಳ ಪ್ರಾಮುಖ್ಯತೆ ಹಾಗೂ ಶಾಸನಗಳ ಮೂಲಕ ತುಳುನಾಡಿನ ಇತಿಹಾಸವನ್ನು ಅರ್ಥೈಸುವಿಕೆಯನ್ನು, ತುಳುನಾಡಿನ ವ್ಯಾಪಾರ ಮಾರ್ಗದ ಕುರಿತಾದ ಮಾಹಿತಿಯನ್ನು ಮಾಹೆಯ ಸಾಂಸ್ಕೃತೀಕ ಕೇಂದ್ರದ ನಿರ್ದೇಶಕ ಡಾ.ಬಿ. ಜಗದೀಶ್ ಶೆಟ್ಟಿ ನೀಡಿದರು.
ಇದೇ ವೇಳೆ ಹೆಬ್ರಿಯ ಸಮೀಪದ ಚಾರದ ಪುರಾತನ ಬಸದಿಗೆ ವಿದ್ಯಾರ್ಥಿಗಳೊಂದಿಗೆ ಬೇಟಿ ನೀಡಲಾಯಿತು. ವಿದ್ಯಾರ್ಥಿಗಳಿಗೆ ಬಸದಿಯ ಕುರಿತಾದ ಇತಿಹಾಸವನ್ನು ಪೂರ್ಣಪ್ರಜ್ಞ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಮಹೇಶ್ ಶೆಟ್ಟಿ ವಿವರಿಸಿದರು. ವಿದ್ಯಾರ್ಥಿಗಳು ಈ ಬಸದಿಯ ಕುರಿತು ಸುದೀರ್ಘವಾಗಿ ಚರ್ಚಿಸಿದರು. ನಂತರ ಬಸದಿಯ ಸುತ್ತಲಿನ ಸ್ವಚ್ಛ ಕಾರ್ಯದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡರು. ವಿದ್ಯಾರ್ಥಿಗಳು ವರಂಗ ಜೈನ ಬಸದಿಗೆ ಬೇಟಿ ನೀಡಿ ಅಲ್ಲಿಯ ವಿಶಿಷ್ಟ ಕೆತ್ತನೆಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಹೆಬ್ರಿ ಕಾಲೇಜಿನ ಪ್ರಾಂಶುಪಾಲ ಡಾ.ವಿಷ್ಣುಮೂರ್ತಿ ಪ್ರಭು, ಸ.ಪ್ರ.ದ ಕಾಲೇಜು ಹೆಬ್ರಿ ಇಲ್ಲಿಯ ಇತಿಹಾಸ ವಿಭಾಗದ ಮುಖ್ಯಸ್ಥ ಅರುಣಾಚಲ್ ಕೆ.ಎಸ್, ಹಾಗೂ ಇಲ್ಲಿಯ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕ ಆಶಾಲತಾ ಹಾಗೂ ಪೂರ್ಣಪ್ರಜ್ಞ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಮಹೇಶ್ ಶೆಟ್ಟಿ, ಉಪನ್ಯಾಸಕಿ ಶಿಲ್ಪಲತಾ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.