ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಮಾರ್ಗದರ್ಶನದಲ್ಲಿ ರಾಜಕೀಯ ಜೀವನ ಆರಂಭಿಸಿರುವ ಮೃಣಾಲ್‌ ಹೆಬ್ಬಾಳಕರ್ ಜಿಲ್ಲೆಯ ಭವಿಷ್ಯದ ನಾಯಕನಾಗಿದ್ದು, ಇಂತಹ ಯುವಕನಿಗೊಂದು ಅವಕಾಶ ಕೊಡಿ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಜೊತೆಗೂಡಿ ಕೆಎಲ್ಇ ವಿಶ್ವವಿದ್ಯಾಲಯದ ಮೆಡಿಕಲ್ ಕಾಲೇಜು, ಆಯುರ್ವೇದ ಕಾಲೇಜು ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್ ಪರ ಮತಯಾಚಿಸಿದ ಅವರು, ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಮೃಣಾಲ್‌ ಹೆಬ್ಬಾಳಕರ್ ಅವರಿಗೆ ಇನ್ನು 40-50 ವರ್ಷ ರಾಜಕೀಯ ಮಾಡುವ ಹಂಬಲವಿದೆ. ಗೆದ್ದ ಮೇಲೆ ಎಲ್ಲರಿಗೂ ಸ್ಪಂದಿಸುವ ವ್ಯಕ್ತಿ.‌ ತಾಯಿಯಂತೆ ಅಭಿವೃದ್ಧಿ ಬಗ್ಗೆ ಕನಸು ಕಟ್ಟಿಕೊಂಡಿದ್ದಾನೆ. ಇಡೀ ದೇಶದ ಅತಿ ದೊಡ್ಡ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಸಚಿವೆ ಲಕ್ಷ್ಮೀ ಹೆಬ್ಬಾಳಕರ್. ಈ ಯೋಜನೆ ಜಾರಿಗಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕೊಡುಗೆ ಅಪಾರ ಎಂದರು.‌

ದೇಶ‌ ಕಟ್ಟಿದ್ದು ಕಾಂಗ್ರೆಸ್ ಪಕ್ಷ, ಆಹಾರ‌ ಭದ್ರತಾ ಕಾಯ್ದೆ ತಂದಿದ್ದು ನಾವು, ಸರ್ಕಾರದ ಸ್ವಾಮ್ಯದ ಕಂಪನಿಗಳು, ರೈಲ್ವೆ, ಐಐಟಿ ಸೇರಿದಂತೆ ಹಲವು ಕಾಲೇಜು, ವಿಶ್ವವಿದ್ಯಾಲಯಗಳನ್ನು ಕಟ್ಟಿದ್ದು ಕಾಂಗ್ರೆಸ್ ಪಕ್ಷ ಎಂದು‌ ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ಬೆಳಗಾವಿ ಕೇವಲ ಮಾತಿಗಷ್ಟೇ ಎರಡನೇ ರಾಜಧಾನಿ ಆಗಬಾರದು. ಅಭಿವೃದ್ಧಿಯಲ್ಲೂ ಜಿಲ್ಲೆ ಬೆಳೆಯಬೇಕು. ಮಹಿಳಾ ಮೀಸಲಾತಿ ಜಾರಿಗೆ ಬಂದರೆ ನಮ್ಮ ಲಕ್ಷ್ಮೀ ಮೇಡಂ ಅವರಿಗೆ ಮುಖ್ಯಮಂತ್ರಿ ಆಗುವ ಯೋಗವು ಬರಲಿದೆ ಎಂದು ಹೇಳಿದರು.

ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜೀವ್ ಗೌಡ, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್, ಕೆಎಲ್ ಇ ವಿವಿಯ ಆಜೀವ ಸದಸ್ಯ ಡಾ.ವಿ.ಎಸ್. ಸಾಧುನವರ್ ಉಪಸ್ಥಿತರಿದ್ದರು.