ಬೆಳಗಾವಿ :
ಲೋಕಸಭೆ ಚುನಾವಣೆ ಗೆಲ್ಲಲು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಬಿಟ್ಟು ಪೆನ್ ಡ್ರೈವ್ ಹಿಂದೆ ಬಿದ್ದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪಿಸಿದ್ದಾರೆ.
ಬೆಳಗಾವಿ ತಾಲ್ಲೂಕಿನ ಬಾಳೇಕುಂದ್ರಿ ಕೆ.ಎಚ್ ಗ್ರಾಮದಲ್ಲಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಮುಂದಿಟ್ಟುಕೊಂಡು ಕಾಂಗ್ರೆಸ್ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ.
ಲೈಂಗಿಕ ದೌರ್ಜನ್ಯ ಪ್ರಕರಣ ಬಿಜೆಪಿಗೆ ಮುಳುವಾಗಲಿ ಎಂಬ ಅಪೇಕ್ಷೆ ಕಾಂಗ್ರೆಸ್ದ್ದು. ಅದಕ್ಕೆ ಗ್ಯಾರಂಟಿ ಬಗ್ಗೆ ವಿಶ್ವಾಸ ಕಳೆದುಕೊಂಡು, ಪೆನ್ಡ್ರೈವ್ ನೆಚ್ಚಿಕೊಂಡಿದ್ದಾರೆ ಎಂದರು.
ಗ್ಯಾರಂಟಿ ಬಿಟ್ಟು ಪೆನ್ಡ್ರೈವ್ ಪ್ರಕರಣದಿಂದಲೇ ಚುನಾವಣೆಯಲ್ಲಿ ಗೆಲ್ಲುವ ಉಮೇದಿನಲ್ಲಿ ಇರುವ ಕಾಂಗ್ರೆಸ್ನವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಿಲುವು ಸ್ಪಷ್ಟ. ಯಾರೇ ತಪ್ಪಿತಸ್ಥರಿದ್ದರೂ ತನಿಖೆ ಎದುರಿಸಬೇಕು. ಇದರಲ್ಲಿ ಬೇರೆ ಮಾತಿಲ್ಲ ಎಂದರು. ಅಪಪ್ರಚಾರ ಮತ್ತು ಗ್ಯಾರಂಟಿಗಳ ಮೇಲೆ ಭರವಸೆ ಇಟ್ಟುಕೊಂಡ ಕಾಂಗ್ರೆಸ್ನವರು 20ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲ್ಲುವ ಭ್ರಮೆಯಲ್ಲಿದ್ದಾರೆ. ಆದರೆ, ಮತದಾರರು ಅವರ ಅಪಪ್ರಚಾರದ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. 28 ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.