ನಿಮ್ಮ ಜೊತೆಗೆ ನಿಲ್ಲುತ್ತೇವೆ, ಸ್ಥಳೀಯ ಅಭ್ಯರ್ಥಿ ಬೆಂಬಲಿಸಿ ಎಂದು ಮನವಿ

ಬೆಳಗಾವಿ : ಮೇ 7ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಅವರನ್ನು ಬೆಂಬಲಿಸುವಂತೆ ಮಹಿಲಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೆಳಗಾವಿಯ ಕೈಗಾರಿಕೊದ್ಯಮಿಗಳಲ್ಲಿ ಮನವಿ ಮಾಡಿದರು.
ಗುರುವಾರ ಸಂಜೆ ನಗರದ ಫೌಂಡ್ರಿ ಕ್ಲಸ್ಟರ್ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಜೊತೆಗೆ ಪಾಲ್ಗೊಂಡ ಸಚಿವರು, ಕೈಗಾರಿಕೊದ್ಯಮಿಗಳ ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು. ಎಲ್ಲ ಸಮಸ್ಯೆಗಳಿಗೆ ನಿಮ್ಮ ಜೊತೆ ನಿಂತು ಪರಿಹಾರ ಒದಗಿಸಲಾಗುವುದು. ಮೃಣಾಲ್‌ ಹೆಬ್ಬಾಳಕರ್ ಗೆದ್ದು ಬಂದಲ್ಲಿ ಬೆಳಗಾವಿಯನ್ನು ಇಂಡಸ್ಟ್ರಿಯಲ್ ಹಬ್ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು. ಕೈಗಾರಿಕೋದ್ಯಮಿಗಳು ಸೌಲಭ್ಯ ಕೊರತೆಯಿಂದಾಗಿ ಬೆಳಗಾವಿ ಬಿಟ್ಟು ಹೋಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಬೆಂಗಳೂರು ನಂತರ ಬೆಳಗಾವಿಯಲ್ಲಿ ಅತಿಹೆಚ್ಚು ಕೈಗಾರಿಕಾಗಳ ಸ್ಥಾಪನೆಯ ಗುರಿ ಹೊಂದಿದ್ದೇವೆ. ಇರುವ ಕೈಗಾರಿಕೆಗಳಿಗೆ ಆದ್ಯತೆ ಮೇಲೆ ಸೌಲಭ್ಯ ಕಲ್ಪಿಸಲಾಗುವುದು. ನಾನು ಒಮ್ಮೆ ಭರವಸೆ ನೀಡಿದರೆ ಎಂದಿಗೂ ಹಿಂದೆ ಸರಿಯುವುದಿಲ್ಲ. ಈ ಚುನಾವಣೆಯಲ್ಲಿ ಹೊರಗಿನ ವ್ಯಕ್ತಿಗಿಂತ ಸ್ಥಳೀಯ ಅಭ್ಯರ್ಥಿಗೆ ಮತ ನೀಡಿ ನಿಮ್ಮ ಜೊತೆಗೆ ನಾವು ನಿಲ್ಲುತ್ತೇವೆ ಎಂದು ಅವರು ಹೇಳಿದರು.

ಬೆಳಗಾವಿ ಫೌಂಡರಿ ಕ್ಲಸ್ಟರ್ ಅಧ್ಯಕ್ಷ ರಾಮ ಭಂಡಾರೆ, ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ‌ಅಧ್ಯಕ್ಷ ಸಿ.ಸಿ.ಹೊಂಡದಕಟ್ಟಿ, ಶ್ರೀಧರ್ ಉಪ್ಪಿನ್, ಜಯಂತ್ ಹುಂಬರವಾಡಿ, ಮನೋಜ್ ಮತ್ತಿಕೊಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.