ಬೆಂಗಳೂರು : ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಎರಡನೇ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮೇ 7ರಂದು ಮತದಾನ ನಡೆಯಲಿದ್ದು, ಅದರ ಬಹಿರಂಗ ಪ್ರಚಾರಕ್ಕೆ ರವಿವಾರ ಸಂಜೆ ತೆರೆಬಿದ್ದಿದೆ. ಇನ್ನೇನಿದ್ದರೂ ಮತದಾನ ನಡೆಯಬೇಕು. ಈಗ ಮತದಾನ ನಡೆಯಲಿರುವ 14 ಕ್ಷೇತ್ರಗಳ ಪೈಕಿ ಬಹುತೇಕ ಕ್ಷೇತ್ರಗಳು ಬಿಸಿಲ ಬೇಗೆ ಎದುರಿಸುತ್ತಿದ್ದು, ತಾಪಮಾನ ಉತ್ತುಂಗದಲ್ಲಿದೆ.

ಈ ಬಿಸಿಲ ಬೇಗೆಯನ್ನು ಸಮರ್ಥವಾಗಿ ನಿರ್ವಹಿಸಿ ಮತದಾನಕ್ಕೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಡುವುದಕ್ಕೆ ಚುನಾವಣ ಆಯೋಗ ಸಿದ್ಧತೆ ಮಾಡಿಕೊಂಡಿದೆ. ಈ ಸಿದ್ಧತೆಗಳು ಸಾಕಾರಗೊಳ್ಳಬೇಕಾದರೆ ಮತದಾರರು ಬಿಸಿಲು ಲೆಕ್ಕಿಸದೆ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕು.

ಹವಾಮಾನ ಇಲಾಖೆ ಪ್ರಕಾರ ರಾಯಚೂರು, ಕೊಪ್ಪಳ ಹಾವೇರಿ, ಕಲಬುರಗಿ, ಗದಗ, ದಾರವಾಡ, ಬೀದರ್‌, ಬಾಗಲಕೋಟೆ, ವಿಜಯ ಪುರದಲ್ಲಿ ಉಷ್ಠಾಂಶ 42ರಿಂದ 45 ಡಿಗ್ರಿ ಸೆಲ್ಸಿಯಸ್‌ ಅಸುಪಾಸಿನಲ್ಲಿದೆ. ಈ ಉಷ್ಣಾಂಶ ಎದುರಿಸುವುದು ಆ ಭಾಗದ ಜನರಿಗೆ ಹೊಸ ವಿಷಯವೇನಲ್ಲ. ಈ ಬಿಸಿಲಿನ ನಡುವೆಯೇ ಎಲ್ಲ ದೈನಂದಿನ ಕೆಲಸಗಳು ಅನೂಚಾನವಾಗಿ ನಡೆದಿರುತ್ತವೆ. ಹಾಗಾಗಿ ಬಿಸಿಲು ಮತದಾನಕ್ಕೆ ಅಡ್ಡಿ ಆಗಬಾರದು. ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ ಭಾಗದ ಜನ ಈ ಬಾರಿ ಬಿಸಿಲನ್ನು ಸೋಲಿಸಿ ಮತದನಾವನ್ನು “ಗೆಲ್ಲಿಸಬೇಕು’. ಆ ಮೂಲಕ ಪ್ರಜಾಪ್ರಭುತ್ವದ ಹಬ್ಬಕ್ಕೆ ಮೆರಗು ತಂದುಕೊಡಬೇಕು. ಚುನಾವಣ ಆಯೋಗದ ಜತೆಗೆ ಪ್ರತೀ ಹಂತದಲ್ಲೂ ಕೈ ಜೋಡಿಸಬೇಕು. ಮತದಾನ ಪ್ರಮಾಣವನ್ನು ಶೇ.72ಕ್ಕೆ ಏರಿಸಬೇಕು ಎಂದು ಚುನಾವಣ ಆಯೋಗ ಗುರಿ ಇಟ್ಟುಕೊಂಡಿದೆ. ಅದಕ್ಕೆ 14 ಕ್ಷೇತ್ರಗಳ ಪ್ರತೀಯೊಬ್ಬ ಮತದಾರ ತನ್ನ ಕೊಡುಗೆ ನೀಡಬೇಕು.

ಬಿಸಿಲು, ಉಷ್ಣ ಗಾಳಿಯ ಹೊಡೆತಕ್ಕೆ ಅಂಜಿ ಮತದಾನಕ್ಕೆ ಮತದಾರರು ಹಿಂಜರಿಯಬಾರದು ಎಂಬ ಉದ್ದೇಶದಿಂದ ಮತಕೇಂದ್ರಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಚುನಾವಣ ಆಯೋಗ ಈಗಾಗಲೇ ಸೂಚನೆ ನೀಡಿದೆ. ಅಗತ್ಯವಿದ್ದಲ್ಲಿ ಮತದಾರರಿಗೆ ಶಾಮಿಯಾನ, ಫ್ಯಾನ್‌ ಮತ್ತು ಕೂರುವ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾ ಚುನಾವಣಧಿಕಾರಿಗಳಿಗೆ ಆಯೋಗ ಹೇಳಿದೆ. ಆಯೋಗದ ಈ ಕ್ರಮಗಳಿಗೆ ಮತದಾರರು ತಮ್ಮ ಇಚ್ಛಾಶಕ್ತಿ ಮೂಲಕ ಸ್ಪಂದಿಸಬೇಕು. ಸಾಧ್ಯವಾದಷ್ಟು ಬಿಸಿಲು ಏರುವ ಮೊದಲೇ ಅಂದರೆ ಬೆಳಗಿನ ಅವಧಿಯಲ್ಲಿ ಗರಿಷ್ಠ ಮತದಾನ ಆಗುವಂತೆ ನೋಡಿಕೊಳ್ಳಬೇಕು. ತಾವೊಬ್ಬರೇ ಮತ ಚಲಾಯಿಸುವುದು ಮುಖ್ಯವಲ್ಲ. ತಮ್ಮ ಕುಟುಂಬದ ಸದಸ್ಯರು, ನೆರೆಹೊರೆಯವರು, ಪರಿಚಯಸ್ಥರು, ಸಂಬಂಧಿಕರಿಗೂ ಮತದಾನದ ಬಗ್ಗೆ ಪ್ರೇರೇಪಿಸಬೇಕು.

ಮಂಗಳವಾರ (ಮೇ 7) ರಂದು ಮತದಾನ ನಡೆಯಲಿರುವ 14 ಕ್ಷೇತ್ರಗಳಲ್ಲಿ 1.29 ಕೋಟಿ ಪುರುಷರು ಮತ್ತು ಅಷ್ಟೇ ಸಂಖ್ಯೆಯ ಮಹಿಳಾ ಮತದಾರರು ಸೇರಿ ಒಟ್ಟು 2.59 ಕೋಟಿ ಮತದಾರರು ಇದ್ದಾರೆ. 6.90 ಲಕ್ಷ ಯುವ ಮತದಾರರು, 3.43 ಲಕ್ಷ ಅಂಗವಿಕಲ ಮತದಾರರು, 2.29 ಲಕ್ಷ 85 ವರ್ಷ ಮೇಲ್ಪಟ್ಟ ಮತದಾರರು ಇದ್ದಾರೆ. ಇವರೆಲ್ಲರೂ ಐದು ವರ್ಷಕ್ಕೊಮ್ಮೆ ಸಿಗುವ ಮತದಾನದ ಅವಕಾಶವನ್ನು ಯಾವ ಕಾರಣಕ್ಕೂ ಬಿಟ್ಟುಕೊಡಬಾರದು. ಮಳೆ, ಗಾಳಿ, ಬಿಸಿಲು ಏನೇ ಇರಲಿ, ಮತದಾನವನ್ನು “ಗೆಲ್ಲಿಸುವ’ ಮೂಲಕ ದೇಶವನ್ನು ಗೆಲ್ಲಿಸುವ ಪಣ ನಮ್ಮದಾಗಬೇಕು.