ಬೆಂಗಳೂರು: ಮುಂದಿನ ಒಂದು ವಾರ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮೇ 13 ಹಾಗೂ 14 ರಂದು ರಾಜ್ಯಾದ್ಯಂತ ಹೆಚ್ಚಿನ ಪ್ರಮಾಣದ ಮಳೆಯಾಗಲಿದೆ. ಬೀದ‌ರ್, ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ಬುಧವಾರದಿಂದಲೇ ಮಳೆ ಆರಂಭಗೊಳ್ಳಲಿದ್ದು, ನಂತರದ ದಿನಗಳಲ್ಲಿ ವಿವಿಧ ಜಿಲ್ಲೆಗಳಿಗೆ ವ್ಯಾಪಿಸಲಿದೆ. ಮುಂದಿನ 48 ಗಂಟೆಯಲ್ಲಿ ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ ಜಿಲ್ಲೆಗಳಲ್ಲಿ ಮಳೆಯ ಜತೆ ಜತೆಗೆ ಉಷ್ಣ ಅಲೆ ಇರಲಿದೆ. ಮಳೆಯೊಂದಿಗೆ ಮುಂದಿನ ಎರಡು ದಿನ ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಏರಿಕೆಯ ಭಾಸವಾಗಲಿದ್ದು, ಸೆಕೆಯೂ ಇರಲಿದೆ ಎಂದು ಇಲಾಖೆ ತಿಳಿಸಿದೆ.