ನವದೆಹಲಿ: ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ವಿವಾದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಒಬ್ಬರು ಮತ್ತೊಬ್ಬರ ವಿರುದ್ಧ ಆರೋಪಗಳ ಮಾಡುವುದನ್ನು ಮುಂದುವರಿಸುವುದರ ಬದಲಾಗಿ ಸಂಧಾನ ಸಾಧ್ಯತೆಯತ್ತ ಗಮನಹರಿಸುವಂತೆ ಸಲಹೆ ನೀಡಿದೆ.
ಸಿಂಧೂರಿ ದೂರಿನ ಹಿನ್ನೆಲೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಮಾನಹಾನಿ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿರುವುದನ್ನು ಪ್ರಶ್ನಿಸಿ ರೂಪಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ್ ಓಕ್ ಮತ್ತು ಪಂಕಜ್ ಮಿತ್ತಲ್ ಅವರ ನೇತೃತ್ವದ ವಿಭಾಗೀಯ ಪೀಠ, ಇಬ್ಬರೂ ಅಧಿಕಾರಿಗಳು ಸಾರ್ವಜನಿಕ ಸೇವೆಯಲ್ಲಿದ್ದು, ಈ ನಡತೆ ಮುಂದುವರಿಯಬಾರದು. ಇಬ್ಬರೂ ಯುವ ಅಧಿಕಾರಿಗಳಾಗಿದ್ದು, ಈ ಹಣಾಹಣಿ ಮುಂದುವರಿದರೆ ಅವರ ವೃತ್ತಿಗೆ ಹಾನಿಯಾಗುತ್ತದೆ ಎಂದು ಹೇಳಿದೆ.