ಸೀತಾ ಮಾತೆಯ ಜನ್ಮಸ್ಥಳವೆಂದು ಪರಿಗಣಿಸಲಾದ ಸೀತಾಮಡಿ ಜಿಲ್ಲೆಯ ‘ಪುನೌರ ಧಾಮ’ವನ್ನು ಅಂತರರಾಷ್ಟ್ರೀಯ ಯಾತ್ರಾ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲು ಎನ್‌ಡಿಎ ಸರ್ಕಾರ ನಿರ್ಧರಿಸಿದೆ. ಇದರ ಅಭಿವೃದ್ಧಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಂಪುಟ ₹ 72.47 ಕೋಟಿ ಮೀಸಲಿಟ್ಟಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ. ಸೀತಾಮಡಿ ಲೋಕಸಭಾ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿ (ಯು) ಹಿರಿಯ ನಾಯಕ ಮತ್ತು ಬಿಹಾರ ವಿಧಾನ ಪರಿಷತ್ ಅಧ್ಯಕ್ಷ ದೇವೇಶ್ ಚಂದ್ರ ಠಾಕೂ‌ರ್ ಕಣದಲ್ಲಿದ್ದಾರೆ .

 

ಸೀತಾಮಡಿ: ಬಿಹಾರದ ಸೀತಾಮಡಿಯಲ್ಲಿ ಬಿಜೆಪಿ ಸೀತೆಗಾಗಿ ಮಂದಿರ ನಿರ್ಮಿಸಲಾಗುವುದು ಎಂದು ಕೇಂದ್ರ ಸಚಿವ ಅಮಿತ್‌ ಶಾ ಘೋಷಣೆ ಮಾಡಿದ್ದಾರೆ.

ವೋಟ್‌ ಬ್ಯಾಂಕ್‌ ರಾಜಕೀಯಕ್ಕೆ ಬಿಜೆಪಿಯು ಹೆದರುವುದಿಲ್ಲ. ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮಲಲ್ಲಾನಿಗಾಗಿ ರಾಮಮಂದಿರ ನಿರ್ಮಾಣ ಮಾಡಿದ್ದಾರೆ. ರಾಮನ ಜನ್ಮಭೂಮಿಯಲ್ಲಿ ಮಂದಿರ ನಿರ್ಮಿಸಲಾಗಿದೆ. ಸೀತೆಯ ಜನ್ಮಸ್ಥಳದಲ್ಲಿ ಸೀತೆಗಾಗಿ ಮಂದಿರ ನಿರ್ಮಾಣ ಮಾಡುವ ಅವಶ್ಯಕತೆ ಇದೆ. ರಾಮಮಂದಿರ ನಿರ್ಮಾಣ ಮಾಡಲು ಅಧಿಕಾರದಲ್ಲಿದ್ದವರು ದೂರದಲ್ಲೇ ಉಳಿದರು. ಆದರೆ, ಮೋದಿ ಅವರ ಕಾಲದಲ್ಲಿ ರಾಮಮಂದಿರ ನಿರ್ಮಾಣ ಮಾಡಲಾಯಿತು. ಈಗ ಸೀತೆಗಾಗಿ ಯಾರಾದರೂ ರಾಮಮಂದಿರ ನಿರ್ಮಾಣ ಮಾಡಿದರೆ, ಅದು ನರೇಂದ್ರ ಮೋದಿ ಅವರು ಮಾತ್ರ ಎಂದು ಬಿಹಾರದ ಸೀತಾಮಡಿಯಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಅಮಿತ್ ಶಾ ಹೇಳಿದ್ದಾರೆ.

ಹಿಂದು ಗ್ರಂಥಗಳ ಪ್ರಕಾರ, ರಾಜ ಜನಕನು ಸೀತಾಮಡಿಯ ಜಮೀನೊಂದರಲ್ಲಿ ಉಳುಮೆ ಮಾಡುವಾಗ ಮಡಿಕೆಯೊಂದರಿಂದ ಭಗವಾನ್‌ ರಾಮನ ಪತ್ನಿ ಸೀತೆ ಉದ್ಭವಿಸಿದರು ಎಂದು ಹೇಳಲಾಗುತ್ತಿದೆ. ಹಾಗಾಗಿ, ಸೀತಾಮಡಿಯನ್ನು ಪವಿತ್ರ ಸ್ಥಾನ ಎಂದೇ ಹೇಳಲಾಗುತ್ತಿದೆ. ಸೀತಾಮಡಿಯು ಲೋಕಸಭೆ ಕ್ಷೇತ್ರವೂ ಆಗಿದೆ.

ಕೆಲ ದಿನಗಳ ಹಿಂದಷ್ಟೇ ರಾಮಮಂದಿರ ಕುರಿತು ನರೇಂದ್ರ ಮೋದಿ ಮಾತನಾಡಿದ್ದರು. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 400 ಕ್ಷೇತ್ರಗಳಲ್ಲಿ ಗೆಲ್ಲಿಸಿ ಎಂಬುದಾಗಿ ನಾನು ನಿಮ್ಮಲ್ಲಿ ಮನವಿ ಮಾಡಲು ಹಲವು ಕಾರಣಗಳಿವೆ. ನೀವು ಬಹುಮತ ನೀಡಿದ ಕಾರಣಕ್ಕಾಗಿಯೇ ನಾವು 370ನೇ ವಿಧಿಯನ್ನು ರದ್ದುಗೊಳಿಸಿದೆವು. ಹಾಗಾಗಿ, ಕಾಂಗ್ರೆಸ್‌ 370ನೇ ವಿಧಿಯನ್ನು ಮತ್ತೆ ಜಾರಿಗೆ ತರಬಾರದು, ಅಯೋಧ್ಯೆಯ ರಾಮಮಂದಿರಕ್ಕೆ ಬಾಬ್ರಿ ಮಸೀದಿ ಬೀಗ ಜಡಿಯಬಾರದು, ನಮ್ಮ ದೇಶದ ದ್ವೀಪಗಳನ್ನು ಬೇರೆ ದೇಶಗಳಿಗೆ ನೀಡಬಾರದು, ಒಬಿಸಿ ಮೀಸಲಾತಿಯನ್ನು ಕಿತ್ತು ಧರ್ಮದ ಆಧಾರದ ಮೇಲೆ ಅಲ್ಪಸಂಖ್ಯಾತರಿಗೆ ನೀಡಬಾರದು ಎಂಬ ಕಾರಣಕ್ಕಾಗಿ ಬಿಜೆಪಿಗೆ ಬಹುಮತ ನೀಡಿ ಎಂಬುದಾಗಿ ಮನವಿ ಮಾಡಿದ್ದರು.

ಲಾಲು ಪ್ರಸಾದ್ ಯಾದವ್‌ ಅವರು ಪವರ್‌ ಪಾಲಿಟಿಕ್ಸ್‌ನಿಂದಾಗಿ ಕಾಂಗ್ರೆಸ್‌ ಜತೆ ಸಖ್ಯ ಬೆಳೆಸಿದರು. ಲಾಲು ಪ್ರಸಾದ್‌ ಯಾದವ್‌ ಅವರು ತಮ್ಮ ಪುತ್ರನನ್ನು ಸಿಎಂ ಮಾಡಬೇಕು ಎಂಬ ಏಕಮಾತ್ರ ಉದ್ದೇಶದಿಂದ ಅವರು ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡರು ಎಂದು ಟೀಕಿಸಿದರು.