ಬಸ್ನಲ್ಲಿ ಮಳೆ ನೀರು ಸೋರುತ್ತಿರಲಿಲ್ಲ. ಬಸ್ ನಲ್ಲಿ ಪ್ರಯಾಣಿಕರು ಯಾರು ಇಲ್ಲದ ವೇಳೆಯಲ್ಲಿ ಕಂಡಕ್ಟರ್ ಅನಿತಾ ಹೆಚ್ ಬಳಿಯಿದ್ದ ಕೊಡೆ ತೆಗೆದುಕೊಂಡು ಮನರಂಜನೆಗಾಗಿ ವಿಡಿಯೋ ಮಾಡಿದ್ದಾರೆ. ಮಳೆ ನೀರು ಸೋರಿಕೆ ಬಗ್ಗೆ ಪ್ರಯಾಣಿಕರಿಂದ ಯಾವುದೇ ದೂರು ಬಂದಿಲ್ಲ ಎಂದು NWKRTC ಅಧಿಕಾರಿಗಳು ತಪಾಸಣೆ ನಡೆಸಿ ವರದಿ ಸಲ್ಲಿಸಿದ್ದಾರೆ.ವಾಯವ್ಯ ಕರ್ನಾಟಕ ಸಾರಿಗೆ ಬಸ್ಸೊಂದರಲ್ಲಿ ಸೋರುತ್ತಿರುವ ಮಳೆನೀರಿನಿಂದ ರಕ್ಷಣೆ ಪಡೆಯುವ ರೀತಿ ಹನುಮಂತಪ್ಪ ಕಿಲ್ಲೇದಾರ ಒಂದು ಕೈಯಲ್ಲಿ ಕೊಡೆ ಹಿಡಿದುಕೊಂಡು ಮತ್ತೊಂದು ಕೈಯಿಂದ ಬಸ್ ಚಲಾಯಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು.
ಬೆಂಗಳೂರು: ಕೆಎಸ್ಆರ್ಟಿಸಿ ಬಸ್ನ ಚಾಲಕರೊಬ್ಬರು ಕೊಡೆ ಹಿಡಿದು ಬಸ್ ಚಲಾಯಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗಿತ್ತು. ಇದೀಗ ಸದರಿ ಬಸ್ನ ಚಾಲಕ ಮತ್ತು ವಿಡಿಯೋ ಮಾಡಿದ ನಿರ್ವಾಹಕಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತಿಳಿಸಿದೆ.
ಒಂದು ಕೈಯಲ್ಲಿ ಕೊಡೆ ಹಾಗೂ ಮತ್ತೊಂದು ಕೈ ಬಳಸಿ ಬಸ್ ಚಲಾಯಿಸಿದ ವಿಡಿಯೋ ವೈರಲ್ ಆದ ಬಳಿಕ ಸಾರ್ವಜನಿಕರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಪ್ರಯಾಣಿಕರ ಜೀವವನ್ನು ನಿರ್ಲಕ್ಷಿಸಿ ಚಾಲಕ ಕೊಡೆ ಹಿಡಿದುಕೊಂಡು ಒಂದೇ ಕೈಯಲ್ಲಿ ಬಸ್ ಚಾಲನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಘಟನೆಗೆ ಸಂಬಂಧಿಸಿದಂತೆ ಸಾರಿಗೆ ಇಲಾಖೆ ಸ್ಪಷ್ಟನೆಯನ್ನೂ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಾರಿಗೆ ಇಲಾಖೆ, ಬೆಟಗೇರಿ ಮಾರ್ಗದಲ್ಲಿ ಕಾರ್ಯಾಚರಿಸುತ್ತಿದ್ದ ಬಸ್ನಲ್ಲಿ ಚಾಲಕರಾಗಿದ್ದ ಹನುಮಂತಪ್ಪ ಅ ಕಿಲ್ಲೇದಾರ ಹಾಗೂ ನಿರ್ವಾಹಕಿ ಅನಿತಾ ಎಚ್ ಬಿ ಅವರು ತಮಾಷೆಗಾಗಿ ಈ ವಿಡಿಯೋವನ್ನು ಮಾಡಿದ್ದಾರೆ. ಅಸಲಿಗೆ ವಿಡಿಯೋ ಚಿತ್ರೀಕರಿಸಿದ ಸಂದರ್ಭದಲ್ಲಿ ಬಸ್ನಲ್ಲಿ ಪ್ರಯಾಣಿಕರು ಇಲ್ಲದೇ ಖಾಲಿಯಿದ್ದು, ಈ ವೇಳೆ ಮನೋರಂಜನೆಗಾಗಿ ಚಾಲಕ ನಿರ್ವಾಹಕಿ ಬಳಿ ಇದ್ದ ಕೊಡೆಯನ್ನು ಪಡೆದು, ಅದನ್ನು ಹಿಡಿದುಕೊಂಡು ವಾಹನ ಚಾಲನೆ ಮಾಡಿದ್ದಾರೆ ಎಂದು ತಿಳಿಸಿದೆ.
ಆ ಸಂದರ್ಭದಲ್ಲಿ ಚಾಲಕರ ಮೇಲಿನ ಛಾವಣಿಯಾಗಲಿ, ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದ ಛಾವಣಿಯಾಗಲಿ ಸೋರಿಕೆ ಇರಲಿಲ್ಲ ಎಂಬುದು ತಿಳಿದುಬಂದಿದೆ. ವಾಹನದ ಛಾವಣಿ ಸೋರಿಕೆ ಬಗ್ಗೆ ಚಾಲಕ, ನಿರ್ವಾಹಕಿ, ಪ್ರಯಾಣಿಕರ ಯಾವುದೇ ದೂರು ಸಹ ದಾಖಲು ಆಗಿಲ್ಲ. ಸದರಿ ವಾಹನವನ್ನು ವಿಭಾಗದ ತಾಂತ್ರಿಕ ಶಿಲ್ಪಿಗಳಿಂದ ಪರಿಶೀಲನೆ ಮಾಡಲಾಗಿದೆ ಹಾಗೂ ಮೇಲ್ಛಾವಣಿ ಸೋರದೆ ಇರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಈ ಕುರಿತು ಸದರಿ ಚಾಲನಾ ಸಿಬ್ಬಂದಿಗಳಿಂದಲೂ ಸ್ಪಷ್ಟೀಕರಣ ಪಡೆಯಲಾಗಿದೆ. ಇದು ಕೇವಲ ಮನೋರಂಜನೆಗಾಗಿ ಮಾಡಿದ ವಿಡಿಯೋ ಚಿತ್ರೀಕರಣ ಎಂದು ಹೇಳಿಕೆ ನೀಡಿದ್ದಾರೆಂದು ಸ್ಪಷ್ಟಪಡಿಸಿದೆ.