ಶಿವಮೊಗ್ಗ :
ನಗರದ ಗೋಪಾಲ ಗೌಡ ಬಡಾವಣೆಯಲ್ಲಿ ಬುಧವಾರ ಬೆಳಗ್ಗೆ ವಾಕಿಂಗ್ ಗೆ ಹೋದವರ ಮೇಲೆ ಕರಡಿ ದಾಳಿ ನಡೆಸಿದೆ. ತುಕಾರಾಂ ಶೆಟ್ಟಿ ಎಂಬುವವರು ಬುಧವಾರ ಬೆಳಗ್ಗೆ ವಾಕಿಂಗ್ ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಕರಡಿ ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಓಡಿಬಂದು ತುಕಾರಾಂ ಶೆಟ್ಟಿ ಅವರ ಮೇಲೆ ದಾಳಿ ನಡೆಸಿ ಪರಾರಿಯಾಗಿದೆ. ಅವರ ಹೊಟ್ಟೆ ಭಾಗಕ್ಕೆ ತರಚಿದ ಗಾಯಗಳಾಗಿವೆ. ತಕ್ಷಣ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಇದೀಗ ಕರಡಿ ಹಿಡಿಯಲು ಸಿದ್ಧತೆ ನಡೆಸಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ತುಕಾರಾಂ ಶೆಟ್ಟಿ, ‘ನಾಯಿಗಳು ಓಡಿಸಿಕೊಂಡು ಬಂದಿದ್ದರಿಂದ ಕರಡಿ ನನ್ನ ಕಡೆಗೆ ಓಡಿ ಬಂತು. ಪರಚಿ ಓಡಿ ಹೋಯಿತುʼ ಎಂದು ತಿಳಿಸಿದ್ದಾರೆ.