ಬೆಂಗಳೂರು : ರಾಜ್ಯಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್‌ನ ಮೂವರು ಹಾಗೂ ಬಿಜೆಪಿಯ ಒಬ್ಬರು ಗೆಲುವು ಸಾಧಿಸಿದ್ದಾರೆ ಎಂದು ಘೋಷಣೆಯಾಯಿತು. ಆಗ ನೂತನ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಅವರನ್ನು ಕಾಂಗ್ರೆಸ್‌ ಬೆಂಬಲಿಗರು ಎತ್ತಿ ಖುಷಿಪಟ್ಟಿದ್ದಾರೆ. ಹಾರವನ್ನು ಹಾಕಿ ಸಂಭ್ರಮಿಸಿದ್ದಾರೆ. ಇದೇ ವೇಳೆ, ಕೆಲವರು ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಘೋಷಣೆ ಕೂಗಿದ್ದಾರೆ.

ವಿಧಾನಸೌಧದೊಳಗೆ ಸಂಭ್ರಮಾಚರಣೆ ವೇಳೆ
ಕಾಂಗ್ರೆಸ್‌ ಬೆಂಬಲಿಗರು‌ ಈ
ಘೋಷಣೆ ಕೂಗಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ವಿರೋಧ ಪಕ್ಷವಾಗಿರುವ ಬಿಜೆಪಿ ಇದನ್ನು ತೀವ್ರವಾಗಿ ಖಂಡಿಸಿದ್ದು ಕಾಂಗ್ರೆಸ್ ವಿರುದ್ಧ ಹೋರಾಟ ಚುರುಕುಗೊಳಿಸಲು ಮುಂದಾಗಿದೆ.

ಇದು ಅತ್ಯಂತ ನಾಚಿಕೆಗೇಡಿನ ಸಂಗತಿ
ಈ ಬಗ್ಗೆ ವಿಧಾನ ಪರಿಷತ್‌ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.‌ ರವಿಕುಮಾರ್‌ ಪ್ರತಿಕ್ರಿಯೆ ನೀಡಿ, ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಇದಕ್ಕೆ ಸುಮೋಟೋ ಕೇಸ್‌ ಅನ್ನು ದಾಖಲು ಮಾಡಬೇಕು. ತಕ್ಷಣವೇ ತಪ್ಪಿತಸ್ಥರನ್ನು ಬಂಧಿಸಬೇಕು. ಇದು ದೇಶದ್ರೋಹದ ಕೆಲಸವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಕೂಡಲೇ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತೇನೆ ಎಂದು ಹೇಳಿದರು.