ಬೆಳಗಾವಿ : ಜುಲೈ 2021 ರಲ್ಲಿ ಎಪಿಎಂಸಿ ಪೊಲೀಸ್ ಠಾಣೆ ಹದ್ದಿಯ ರಾಮನಗರ 2ನೇ ಕ್ರಾಸ್, ಕಂಗ್ರಾಳಿ ಕೆಎಚ್ ಗ್ರಾಮದ ತಮ್ಮ ಮನೆಯ ಮುಂದೆ ಯಾರೋ ಮಾಟಮಂತ್ರ ಮಾಡಿಸಿ ಇಟ್ಟಿರುವ ಬಗ್ಗೆ ಮನನೊಂದ ಆರೋಪಿ ಅನಿಲ್ ಚಂದ್ರಕಾಂತ ಬಾಂದೇಕರ್ ಸಾ.ಬೆಳಗಾವಿ, ರಾಮನಗರ ಕೆಎಚ್ ಕಂಗ್ರಾಳಿ ಬೆಳಗಾವಿ ಇವನು ಅಂಜಲಿ(8) ಮತ್ತು ಅನನ್ಯ(4) ಎಂಬ ತನ್ನ ಎರಡೂ ಹೆಣ್ಣು ಮಕ್ಕಳಿಗೆ ವಿಷ ಕುಡಿಸಿ ಕೊಲೆಗೈದ ಬಗ್ಗೆ ಆತನ ವಿರುದ್ಧ ಅವನ ಹೆಂಡತಿ ಶ್ರೀಮತಿ ಜಯಾ ಬಾಂದೇಕರ್ ನೀಡಿದ ದೂರನ್ನು ಆಧರಿಸಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡು ಆರೋಪಿತನ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ಆಗಿನ ತನಿಖಾಧಿಕಾರಿ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ ಹಿರೇಮಠ ರವರು ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ಶ್ರೀಮತಿ ನಸ್ರೀನ ಬಂಕಾಪುರೆ ಸಾರ್ವಜನಿಕ ಅಭಿಯೋಜಕರು ರವರು ವಾದ ಮಂಡಿಸಿದ್ದರು.
ಪೊಲೀಸ್ ತನಿಖೆ ಸಾಕ್ಷಾಧಾರಗಳನ್ನು ಹಾಗೂ ವಾದವನ್ನು ಆಲಿಸಿದ ಮಾನ್ಯ 6ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಆರೋಪಿತನಿಗೆ ಜೀವಾವಧಿ ಶಿಕ್ಷೆ ಹಾಗೂ 20,000 ದಂಡವನ್ನು ವಿಧಿಸಿ ಶಿಕ್ಷೆ ನೀಡಿರುತ್ತದೆ.
ಆರೋಪಿತನಿಗೆ ಶಿಕ್ಷೆ ಕೊಡಿಸುವಲ್ಲಿ ಶ್ರಮಿಸಿದ ಎಪಿಎಂಸಿ ಠಾಣೆ ಪಿಐ ಮಂಜುನಾಥ ಹಿರೇಮಠ ಹಾಗೂ ತನಿಖಾ ಸಹಾಯಕ ವೀರಭದ್ರ ಬೂದನವರ ರವರ ಕಾರ್ಯವನ್ನು ಯಡಾ ಮಾರ್ಟಿನ ಮಾರ್ಬನ್ಯಾಂಗ ಐಪಿಎಸ್ ಪೊಲೀಸ್ ಆಯುಕ್ತರು, ಬೆಳಗಾವಿ ನಗರ ಹಾಗೂ ಡಿಸಿಪಿ ರವರುಗಳು ಪ್ರಶಂಸಿರುತ್ತಾರೆ.ನಡೆದ ಘಟನೆ ವಿವರ :
ಬೆಳಗಾವಿ ಹೊರವಲಯದ ಕಂಗ್ರಾಳಿಯಲ್ಲಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ
ವಿಷ ಕುಡಿಸಿದ್ದ. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಪ್ರಕರಣವನ್ನು ಭೇದಿಸಿದಾಗ ಸ್ವತಹ ತಂದೆಯೇ ಮಾಟ ಮಂತ್ರಕ್ಕೆ ಆಕರ್ಷಿತನಾಗಿ ಮಕ್ಕಳನ್ನು ಕೊಂದಿರುವ ಸಂಗತಿ ಬಯಲಾಗಿತ್ತು. ಇದೀಗ ನ್ಯಾಯಾಲಯ ಕೊನೆಗೂ ಮಕ್ಕಳನ್ನು ಕೊಂದ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ಬೆಳಗಾವಿ ಕಂಗ್ರಾಳಿ ಕೆ ಎಚ್ ಗ್ರಾಮದ ನಿವಾಸಿ ಅನಿಲ್ ಬಾಂದೇಕರ್ ತನ್ನ ಮನೆ ಮಾರಾಟ ಮಾಡಲು ಯತ್ನಿಸಿದ್ದ. ಆದರೆ ಯಾರೂ ಖರೀದಿಗೆ ಮುಂದಾಗಿರಲಿಲ್ಲ. ಒಂದು ರಾತ್ರಿ ಕನಸಿನಲ್ಲಿ ಇಬ್ಬರು ಮಕ್ಕಳನ್ನು ಕೊಂದು ರಕ್ತವನ್ನು ಶಿವಲಿಂಗಕ್ಕೆ ಅರ್ಪಣೆ ಮಾಡಿದರೆ ನಿನ್ನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂಬ ಭ್ರಮೆಯಿಂದ ಆತ ತನ್ನ ಕುಡಿಗಳಿಗೆ ವಿಷ ಕುಡಿಸಲು ಮುಂದಾಗಿದ್ದ. ಜೊತೆಗೆ ಮಕ್ಕಳ ರಕ್ತವನ್ನು ಶಿವಲಿಂಗಕ್ಕೆ ಹಾಕಿದರೆ ಮನೆ ಮಾರಾಟ ಆಗಿ ಎಲ್ಲಾ ಕೆಲಸದಲ್ಲೂ ಯಶಸ್ಸು ಆಗುತ್ತದೆ ಎಂದು ಆತನಿಗೆ ಕನಸು ಬಿದ್ದಿತಂತೆ. ಅದನ್ನು ನಂಬಿಕೊಂಡು ಮಕ್ಕಳಿಗೆ ಪಿನಾಯಿಲ್ ಕುಡಿಸಿ ಬಾಯಿ ಒತ್ತಿ ಹಿಡಿದು ಕೊಲೆ ಮಾಡಿ ಬ್ಲೇಡಿನಿಂದ ರಕ್ತವನ್ನು ಜಗಲಿಯಲ್ಲಿದ್ದ ಶಿವಲಿಂಗಕ್ಕೆ ಹಾಕಿದ್ದ. ಪೊಲೀಸರ ತನಿಖೆ ವೇಳೆ ಆರೋಪ ಸಾಬೀತು ಗೊಂಡಿದೆ.