ಬೆಳಗಾವಿ: ಅಥಣಿ ತಾಲೂಕಿನ ಬುರ್ಲಟ್ಟಿ ಗ್ರಾಮದಲ್ಲಿ ಎರಡು ಕುಟುಂಬಗಳ ಗಲಾಟೆ ನಡುವೆ ಮೂರು ವರ್ಷದ ಮಗುವನ್ನು ಹತ್ಯೆ ಮಾಡಿದ ಘಟನೆ ವರದಿಯಾಗಿದೆ.
ಮೂರು ವರ್ಷದ ಶ್ರೀನಿಧಿ ಕಾಳ ಪಾಟೀಲ ಎಂಬ ಹೆಣ್ಣು ಮಗುವಿನ ಎದೆ ಮೇಲೆ ಕಾಲಿಟ್ಟು ಮಗುವನ್ನು ಹತ್ಯೆಗೈಯಲಾಗಿದೆ.
ಹಣಕಾಸಿನ ವಿಚಾರಕ್ಕೆ ನಡೆದ ಜಗಳದ ವೇಳೆ ಜ್ಯೋತಿಬಾ ಬಾಬರ್ ಎಂಬಾತ ಮಗುವಿನ ಮೇಲೆ ಕಾಲಿಟ್ಟು ಕೊಂದಿದ್ದಾನೆ. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಘಟನೆ : ಮಗುವಿನ ತಂದೆ ಕಾಡಪ್ಪ ಕಾಳಾಪಾಟೀಲ ಅವರಿಗೆ ಆರೋಪಿ ಜೋತಿಬಾ ಕಳೆದ ವರ್ಷ ₹50 ಸಾವಿರ ಸಾಲ ನೀಡಿದ್ದ. ಈ ಹಣವನ್ನು ಕೇಳಿದಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಶುಕ್ರವಾರ ರಾತ್ರಿ ಮದ್ಯದ ಅಮಲಿನಲ್ಲಿ ಬಂದ ಆರೋಪಿ ಮತ್ತೆ ಜಗಳ ತೆಗೆದಿದ್ದ. ಶನಿವಾರ ಬೆಳಿಗ್ಗೆ ಮನೆ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರು ಮಾಡಿದ. ಆಗ ಕಾಡಪ್ಪ ಹಾಗೂ ಜ್ಯೋತಿಬಾ ನಡುವೆ ಹೊಡೆದಾಟ ಶುರುವಾಯಿತು.
ಹತ್ತಿರದಲ್ಲೇ ಇದ್ದ ಮಗುವನ್ನು ಎತ್ತಿಕೊಂಡ ಆರೋಪಿ ಟ್ರ್ಯಾಕ್ಟರ್ ಚಕ್ರದ ಕೆಳಗೆ ಬಿಸಾಗಿದ. ನಂತರ ಎದೆ ಮೇಲೆ ಕಾಲಿಟ್ಟು ಕೊಲೆ ಮಾಡಿದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.