ಬೆಂಗಳೂರು : ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತಾನು ಪ್ರಬಲ ಆಕಾಂಕ್ಷಿಯಾಗಿರುವುದಾಗಿ ಬೆಳಗಾವಿಯಲ್ಲಿ ಎಸ್ಪಿ ಹಾಗೂ ಮೊದಲ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದ ಜನಪ್ರಿಯ ಅಧಿಕಾರಿ, ಹಾಲಿ ಬಿಜೆಪಿ ನಾಯಕ ಬಿ. ಭಾಸ್ಕರ್ ರಾವ್ ತಮ್ಮ ಮನದಿಂಗಿತ ವ್ಯಕ್ತಪಡಿಸಿದ್ದಾರೆ.
ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ರಾಜ್ಯದ ರಾಜಧಾನಿ ಬೆಂಗಳೂರು, ಬೆಳಗಾವಿ ಸೇರಿದಂತೆ ವಿವಿಧಡೆ ಮೂರು ದಶಕಗಳ ಕಾಲ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ನಂತರ ರಾಜಕೀಯ ಪ್ರವೇಶಿಸುವ ಅಭಿಲಾಷೆಯಿಂದ ಹುದ್ದೆಗೆ ರಾಜೀನಾಮೆ ನೀಡಿ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಸೇರಿ ರಾಜಕೀಯ ಆರಂಭಿಸಿ ನಂತರ ಬಿಜೆಪಿ ಕೈ ಹಿಡಿದಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಇದೀಗ ಲೋಕಸಭಾ ಚುನಾವಣೆಗೆ ಮೈಸೂರು-ಕೊಡಗು ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ಹೊಂದಿದ್ದಾರೆ. ಕೊಡಗಿಗೆ ಭೇಟಿ ನೀಡಿರುವ ಅವರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಭೇಟಿಯಾಗಿ ತಮಗೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಕೊಡಗಿನಲ್ಲಿ ಮತ್ತೆ ಹಿತೈಷಿಗಳ ಸಭೆ ನಡೆಸಲು ಸಿದ್ಧತೆ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ಮೈಸೂರು ಜಿಲ್ಲೆಯವನು. ನಂಜನಗೂಡಿನ ತಾಲೂಕಿನ ಕಳಲೆ ಗ್ರಾಮದ ನಿವಾಸಿ. ಮೈಸೂರಿನಲ್ಲಿ ಮನೆ ಇದೆ. ಆದ್ದರಿಂದ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಉತ್ತಮ ಸಂಬಂಧವಿದೆ. ಜೊತೆಗೆ ನನ್ನ ಪತ್ನಿ ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ನಾನೂ ಸಹಾ ಕೊಡಗಿನ ಪೊಲೀಸ್ ಇಲಾಖೆಯಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ ಜನಪರ ಕೆಲಸ ಮಾಡಿದ್ದೇನೆ. ಕೊಡಗಿನಲ್ಲಿ ನಾನು ಚಿರಪರಿಚಿತನಾಗಿದ್ದೇನೆ. ಈ ಭಾಗದ ಜನರ ಜೊತೆ ಉತ್ತಮ ಸಂಪರ್ಕ ಹೊಂದಿದ್ದೇವೆ. ಮೂರು ತಲೆಮಾರುಗಳ ಜನರೊಂದಿಗೆ ನಮ್ಮ ಸಂಬಂಧವಿದೆ. ಹೀಗಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಕೇಳುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ಸದ್ಯ ನಾನು ಟಿಕೆಟ್ ಆಕಾಂಕ್ಷಿ. ಆದರೆ ಅಂತಿಮ ನಿರ್ಧಾರ ಪಕ್ಷದ್ದೇ ಆಗಿರುತ್ತದೆ. ಪಕ್ಷ ಟಿಕೆಟ್ ನೀಡಿದರೆ ಸ್ಪರ್ಧೆಗೆ ಸಿದ್ದ ಅಥವಾ ಬೇರೆಯವರಿಗೆ ಟಿಕೆಟ್ ನೀಡಿದರೂ ಅವರ ಗೆಲುವಿಗೂ ಶ್ರಮಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.