ಲಕ್ನೋ : ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ 10 ಅಡಿ ಉದ್ದದ ಮೊಸಳೆಯೊಂದು ಮನೆಯ ಮುಂದಿನ ಕಬ್ಬಿಣದ ಸರಳುಗಳಿಂದ ಕೂಡಿದ ಗೇಟ್‌ ಅನ್ನು ಏರಲು ಪ್ರಯತ್ನಿಸುತ್ತಿರುವ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ಇದು ಜನರನ್ನು ದಿಗ್ಭ್ರಾಂತರನ್ನಾಗಿಸಿದೆ.

ವರದಿಗಳ ಪ್ರಕಾರ, ಮೊಸಳೆಯು ಕಾಲುವೆಯಿಂದ ತೆವಳುತ್ತಾ ಹತ್ತಿರದ ಜನ ವಸತಿ ಪ್ರದೇಶಕ್ಕೆ ಪ್ರವೇಶಿಸಿದೆ. ಕಾಲುವೆಯ ಪಾದಚಾರಿ ಮಾರ್ಗದಲ್ಲಿ ಹತ್ತು ಅಡಿ ಎತ್ತರದ ಮೊಸಳೆ ನೋಡಿ ಸ್ಥಳೀಯರು ಒಂದು ಸಲ ಬೆಚ್ಚಿಬಿದ್ದಿದ್ದಾರೆ.
ವೀಡಿಯೊದಲ್ಲಿ, ಮೊಸಳೆ ಕೆಳಗೆ ಹರಿಯುವ ಗಂಗಾ ನದಿಗೆ ಹಾರಲು ಕಬ್ಬಿಣದ ಗೇಟ್‌ ಅನ್ನು ಹತ್ತುತ್ತಿರುವುದನ್ನು ಕಾಣಬಹುದು. ಆದರೆ, ಅದು ವಿಫಲವಾಗಿ ನೆಲಕ್ಕೆ ದೊಪ್ಪೆಂದು ಬೀಳುತ್ತದೆ. ವೀಡಿಯೊವನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ. ನಂತರ ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಮತ್ತು ಅರಣ್ಯ ಇಲಾಖೆ ಮೊಸಳೆ ರಕ್ಷಣೆಗೆ ಹರಸಾಹಸ ಪಟ್ಟರು.

“ಮೊಸಳೆ ಕಾಲುವೆಯಿಂದ ತೆವಳಿಕೊಂಡು ಹೊರಗೆ ಬಂದಿದೆ, ಅದು ಜನವಸತಿ ಪ್ರದೇಶವನ್ನು ತಲುಪಿದೆ ಮತ್ತು ಅದು ಕಾಲುವೆಗೆ ಮರಳಲು ಪ್ರಯತ್ನಿಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಾವು ಮೊಸಳೆಯನ್ನು ರಕ್ಷಿಸಿ ಮತ್ತೆ ಕಾಲುವೆಗೆ ಬಿಟ್ಟಿದ್ದೇವೆ” ಎಂದು ಅರಣ್ಯ ಇಲಾಖೆಯ ದಿಬಾಯಿ ರೇಂಜ್‌ನ ವೃತ್ತ ಅಧಿಕಾರಿ ಮೋಹಿತ್ ಚೌಧರಿ ತಿಳಿಸಿದ್ದಾರೆ.
ವರದಿಯ ಪ್ರಕಾರ, ಸ್ಥಳೀಯರು ಉತ್ತರ ಪ್ರದೇಶದ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು, ನಂತರ ಅರಣ್ಯ ರೇಂಜ್ ಅಧಿಕಾರಿ ಮೋಹಿತ ಚೌಧರಿ, ಮೊಸಳೆ ರಕ್ಷಣಾ ತಜ್ಞ ಪವನಕುಮಾರ ಅವರೊಂದಿಗೆ ಮೊಸಳೆ ರಕ್ಷಣೆ ಕಾರ್ಯಾಚರಣೆಗೆ ಇಳಿದರು.

ಮೊಸಳೆಯನ್ನು ಹಿಡಿಯಲು ಅರಣ್ಯಾಧಿಕಾರಿಗಳು ಮೊದಲು ಅದರ ತಲೆಯನ್ನು ಬಟ್ಟೆಯಿಂದ ಮುಚ್ಚಿ ಬಾಯಿಗೆ ಹಗ್ಗದಿಂದ ಬಿಗಿದಿದ್ದರು. ನಂತರ ಅವರು ಅದರ ಹಿಂಗಾಲುಗಳನ್ನು ಹಗ್ಗಗಳಿಂದ ಕಟ್ಟಿದರು. ಇದು ಹೆಣ್ಣು ಮೊಸಳೆ ಎಂದು ಹೇಳಲಾಗಿದ್ದು, ನಂತರ ಅದರ ನೈಸರ್ಗಿಕ ಆವಾಸಸ್ಥಾನಕ್ಕೆ ಬಿಡಲಾಯಿತು.

ಇದಕ್ಕೂ ಮುನ್ನ ಘಟನೆಯೊಂದರಲ್ಲಿ ಅಸ್ಸಾಂನ ನಾಗಾಂವ್ ಜಿಲ್ಲೆಯ ನಿವಾಸಿಯೊಬ್ಬರು ತಮ್ಮ ಮನೆಯ ಸ್ನಾನಗೃಹದಲ್ಲಿ ಕೇವಲ ಒಂದಲ್ಲ ಎರಡಲ್ಲ ಒಟ್ಟು 35 ಹಾವುಗಳನ್ನು ಕಂಡು ಬೆಚ್ಚಿಬಿದ್ದರು. ಪ್ರಾಣಿ ಪ್ರೇಮಿ ಸಂಜೀವ ದೇಕಾ ಅವರು ಹಾವುಗಳನ್ನು ರಕ್ಷಿಸಿದರು ಮತ್ತು ನಂತರ ಅವುಗಳನ್ನು ನೈಸರ್ಗಿಕ ಆವಾಸಸ್ಥಾನಕ್ಕೆ ಬಿಟ್ಟರು.