ಮುಂಬೈ :
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ಮುರಳಿ ದಿಯೋರಾ ಅವರ ಪುತ್ರ ಮಿಲಿಂದ್ ದಿಯೋರಾ ಇದೀಗ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿರುವ ಅವರು, ನಾನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಕಾಂಗ್ರೆಸ್ ಪಕ್ಷದ ಜೊತೆಗೆ ನಮ್ಮಕುಟುಂಬದ 55 ವರ್ಷಗಳ ಸಂಬಂಧ ಅಂತ್ಯಗೊಳಿಸುತ್ತಿದ್ದೇನೆ. ಹಲವು ವರ್ಷಗಳಿಂದ ಬೆಂಬಲಿಸುತ್ತಾ ಬಂದ ಎಲ್ಲಾ ನಾಯಕರಿಗೆ ಸಹೋದ್ಯೋಗಿಗಳು ಮತ್ತು ಕಾರ್ಯಕರ್ತರಿಗೆ ಕೃತಜ್ಞನಾಗಿದ್ದೇನೆ ಎಂದು ತಿಳಿಸಿದ್ದಾರೆ.
ಮಿಲಿಂದ್ ಈ ಹಿಂದೆ ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರವನ್ನು 2004 ಮತ್ತು 2009ರಲ್ಲಿ ಪ್ರತಿನಿಧಿಸಿದ್ದರು. 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಶಿವಸೇನೆಯ ಅರವಿಂದ ಸಾವಂತ್ ವಿರುದ್ಧ ಸೋಲು ಅನುಭವಿಸಿದ್ದರು.
ಮುಂಬೈ ದಕ್ಷಿಣ ಕ್ಷೇತ್ರವನ್ನು ಇತ್ತೀಚಿಗೆ ಉದ್ಧವ ಠಾಕ್ರೆ ಬಣ ಗೆದ್ದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ರಾಹುಲ್ ಗಾಂಧಿ ಅವರ ತಂಡದೊಂದಿಗೆ ಗುರುತಿಸಿಕೊಂಡ ಮಿಲಿಂದ್ ಇತ್ತೀಚಿಗೆ ಅವರಿಂದ ದೂರ ಉಳಿದಿದ್ದರು. ಪಕ್ಷಕ್ಕೆ ರಾಜೀನಾಮೆ ನೀಡಿರುವ ಅವರು ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಶಿವಸೇನೆ ಸೇರುವ ಸಾಧ್ಯತೆ ಹೆಚ್ಚಾಗಿದೆ.