ಬೆಳಗಾವಿ :
“ಲೀಲಾವತಿ ಅವರ ಬಳಿ ಹಣವಿಲ್ಲದಿದ್ದರೂ ಹೃದಯವಂತಿಯಲ್ಲಿ ಬಹಳ ದೊಡ್ಡ ಶ್ರೀಮಂತರು. ತಮ್ಮ ಬದುಕಿನಲ್ಲಿ ಅನೇಕ ಕಷ್ಟ ಬಂದರೂ ಅವರು ಪರೋಪಕಾರಕ್ಕೆ ಜೀವನ ನಡೆಸಿ ಅನೇಕ ಸಾಕ್ಷಿ ಗುಡ್ಡೆಗಳನ್ನು ಬಿಟ್ಟು ಹೋಗಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಣ್ಣಿಸಿದರು.

ವಿಧಾನಸಭೆಯಲ್ಲಿ ಹಿರಿಯ ನಟಿ ಲೀಲಾವತಿ ಅವರ ನಿಧನಕ್ಕೆ ಸಂತಾಪ ಸೂಚಕ ನಿರ್ಣಯದ ಚರ್ಚೆಯಲ್ಲಿ ಸೋಮವಾರ ಮಾತನಾಡಿದ ಶಿವಕುಮಾರ್ ಅವರು, ಲೀಲಾವತಿ ಅವರ ಜತೆಗಿನ ತಮ್ಮ ಒಡನಾಟ ಸ್ಮರಿಸಿ, ಅವರ ಸಮಾಜ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು;

“ಒಂದಷ್ಟು ಜನ ಬದುಕಿದ್ದಾಗ ಸತ್ತಂತೆ ಇರುತ್ತಾರೆ. ಇನ್ನೂ ಕೆಲವರು ಸತ್ತ ಮೇಲೂ ಬದುಕಿರುತ್ತಾರೆ.

ಲೀಲಾವತಿ ಅವರು ನಿಧನರಾಗುವ ಕೆಲವು ದಿನಗಳ ಮುಂಚೆ ಕೃತಕ ಉಸಿರಾಟದ ಸಾಧನ ಹಾಕಿಕೊಂಡೇ ಸದಾಶಿವನಗರದ ನನ್ನ ಮನೆ ಬಳಿ ಬಂದಿದ್ದರು. ಆಗ ನಾನು ಅವರ ಮಗ ವಿನೋದ್ ರಾಜ್ ಗೆ ಇಂತಹ ಪರಿಸ್ಥಿತಿಯಲ್ಲಿ ಏಕೆ ಕರೆದುಕೊಂಡು ಬಂದೆ ಎಂದು ಬೈದಿದ್ದೆ. ಕಾರಿನಲ್ಲೆ ಕುಳಿತಿದ್ದ ಲೀಲಾವತಿ ಅವರ ಬಳಿ ಹೋಗಿ ಏನು ಬಂದದ್ದು ಎಂದು ಕೇಳಿದೆ. ಆಗ ಅವರು ಅಲ್ಪಸ್ವಲ್ಪ ಮಾತನಾಡುತ್ತಿದ್ದರು.

“ನಾನು ಪಶುವೈದ್ಯ ಆಸ್ಪತ್ರೆ ಕಟ್ಟಿಸಿದ್ದೇನೆ. ನೀವೇ ಬಂದು ಅದರ ಉದ್ಘಾಟನೆ ಮಾಡಬೇಕು” ಎಂದರು.

ನಾವು ಬೇರೆಯವರ ಸಹಾಯದಲ್ಲಿ ಆಸ್ಪತ್ರೆಗಳನ್ನು ಕಟ್ಟಿಸಿರುವುದನ್ನು ನೋಡಿದ್ದೇವೆ. ನನ್ನ ಕ್ಷೇತ್ರದಲ್ಲಿ ಇನ್ಫೋಸಿಸ್ ಅವರ ನೆರವಿನಿಂದ ತಾಯಿ-ಮಗು ಆಸ್ಪತ್ರೆ ಕಟ್ಟಿಸಿದ್ದೇವೆ. ಬೇರೆ ಸಂಸ್ಥೆಗಳ ನೆರವಿನಿಂದ ಶಾಲೆ ಕಟ್ಟಿಸಿದ್ದೇವೆ. ಆದರೆ ಲೀಲಾವತಿ ಅವರು ತಮ್ಮದೇ ಸ್ವಂತ ದುಡ್ಡಿನಲ್ಲಿ ಪಶುವೈದ್ಯ ಶಾಲೆ ಹಾಗೂ ಪ್ರಾಥಮಿಕ ಚಿಕಿತ್ಸಾ ಕೇಂದ್ರವನ್ನು ಕಟ್ಟಿಸಿದ್ದಾರೆ. ಅವರಿಗೆ ಮನುಷ್ಯರು ಹಾಗೂ ಮೂಕಪ್ರಾಣಿಗಳ ಬಗ್ಗೆ ಎಷ್ಟು ಪ್ರೀತಿ, ಕಾಳಜಿ ಇತ್ತು ಎಂಬುದಕ್ಕೆ ಇದು ಉದಾಹರಣೆ. ಅವರೇ ಕಷ್ಟದಲ್ಲಿ ಜೀವನ ನಡೆಸುತಿದ್ದರೂ ಆಸ್ಪತ್ರೆ ಕಟ್ಟಿಸಿದ್ದಾರೆ. ಆ ಮೂಲಕ ತಮ್ಮ ಮಾನವೀಯತೆ ಮೆರೆದಿದ್ದಾರೆ. ಬೇರೆಯವರಿಗೆ ಮಾದರಿ ಆಗಿದ್ದಾರೆ.

ಸಚಿವ ವೆಂಕಟೇಶ್ ಅವರು ಬೆಂಗಳೂರಿನಲ್ಲಿದ್ದ ಆಸ್ಪತ್ರೆಯ ಸಿಬ್ಬಂದಿ ಮತ್ತು ಕೆಲವು ಸೌಲಭ್ಯವನ್ನು ಸೋಲದೇವನಹಳ್ಳಿಯ ಆಸ್ಪತ್ರೆಗೆ ಸ್ಥಳಾಂತರಿಸಿ ಆದೇಶ ಮಾಡಿಕೊಟ್ಟರು. ನನ್ನ ರಾಜಕಾರಣದ ಬದುಕಿನಲ್ಲಿ ನೋಡಿದಂತೆ, ಯಾರಾದರೂ ತಮ್ಮ ಸ್ವಂತ ದುಡ್ಡಿನಲ್ಲಿ ಪಶುವೈದ್ಯ ಶಾಲೆ ಕಟ್ಟಿಸಿಕೊಟ್ಟಿದ್ದರೆ ಅದು ಲೀಲಾವತಿ ಹಾಗೂ ವಿನೋದ್ ರಾಜ್ ಅವರು ಮಾತ್ರ. ಇದನ್ನು ಸದನದ ದಾಖಲೆಯಲ್ಲಿ ಉಳಿಸಲು ನಾನು ಬಯಸುತ್ತೇನೆ.
ನಾನು ಬಂದೀಖಾನೆ ಸಚಿವನಾಗಿದ್ದ ಸಂದರ್ಭದಲ್ಲಿ ಹಿರಿಯ ನಟಿ ಲೀಲಾವತಿಯವರು ಮತ್ತು ಅವರ ಮಗನಾದ ವಿನೋದ್ ರಾಜ್ ಅವರು ಕಾರಾಗೃಹದಲ್ಲಿ ಸಿನಿಮಾ ಚಿತ್ರೀಕರಣಕ್ಕೆ 10 ಸಾವಿರ ಹಣ ನೀಡಿ ಅನುಮತಿ ತೆಗೆದುಕೊಂಡಿದ್ದರು. ಕಾರಣಾಂತರಗಳಿಂದ ಕಾರಾಗೃಹ ಅಧಿಕಾರಿಗಳು ಚಿತ್ರೀಕರಣ ಅನುಮತಿಯನ್ನು ರದ್ದು ಮಾಡಿದ್ದರು. ಆಗ ಲೀಲಾವತಿ ಅವರು ನನ್ನ ಬಳಿ ಬಂದು ತಮಗೆ ಆಗಿರುವ ತೊಂದರೆ ಬಗ್ಗೆ ಹೇಳಿದರು. ಯಾರೋ ಮುಖ್ಯಮಂತ್ರಿ ಬಂಗಾರಪ್ಪ ಅವರಿಂದಲೂ ಜೈಲು ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿಸಿದ್ದರು. ಆಗ ನಾನು ತಕ್ಷಣ ಮಧ್ಯ ಪ್ರವೇಶಿಸಿ ಲೀಲಾವತಿ ಅವರ ಪುತ್ರನ ಚಿತ್ರದ ಚಿತ್ರೀಕರಣಕ್ಕೆ ಅನುಮತಿ ನೀಡಿದೆ.

ಈ ಘಟನೆ ನಡೆದು 30 ವರ್ಷಕ್ಕೂ ಹೆಚ್ಚು ಕಾಲ ಆಗಿದೆ. ಆಗಿನಿಂದಲೂ ಅವರಿಗೆ ಕೆಲವರು ಸಾಕಷ್ಟು ಕಷ್ಟ ಕೊಡುತ್ತಿದ್ದರು. ಆ ಕಷ್ಟಗಳ ನಡುವೆಯೂ ಲೀಲಾವತಿ ಅವರು ಬದುಕಿ, ಬದುಕು ಜಯಿಸಿದರು. ಅವರ ಬದುಕು, ಸ್ವಾಭಿಮಾನದ ಬಗ್ಗೆ ಯಾರೊಬ್ಬರೂ ಪ್ರಶ್ನೆ ಎತ್ತಲು ಆಗುವುದಿಲ್ಲ. ಬಡತನದಲ್ಲೂ ಶ್ರೀಮಂತ್ರಿಕೆ ಮೆರೆದವರು. ಅವರದು ಹಣದ ಬದಲು ಹೃದಯ ಶ್ರೀಮಂತ್ರಿಕೆಯ ವ್ಯಕ್ತಿತ್ವ.

ಚಿತ್ರರಂಗದಲ್ಲಿ ಅವರ ಸಾಧನೆ ಬಗ್ಗೆ ನಾವು ಹೇಳುವ ಅಗತ್ಯವೇ ಇಲ್ಲ. 600ಕ್ಕೂ ಹೆಚ್ಚು ಚಿತ್ರಗಳು, ಅನೇಕ ನಾಟಕಗಳಲ್ಲಿ ನಟಿಸಿದ್ದಾರೆ. ಅವರದು ಸರಳ ಜೀವನ. ವಿರೋಧ ಪಕ್ಷದ ನಾಯಕರು ಕೆಲವು ಸಲಹೆ ನೀಡಿದ್ದು, ನಮ್ಮ ಸರ್ಕಾರದ ಕಡೆಯಿಂದ ಅದನ್ನು ಆಲೋಚನೆ ಮಾಡಿ ತೀರ್ಮಾನಿಸುತ್ತೇವೆ. ಅವರು ಕಟ್ಟಿಸಿರುವ ಆಸ್ಪತ್ರೆ ಮುಂದೆ ಅವರ ಪ್ರತಿಮೆ ನಿರ್ಮಾಣದ ಬಗ್ಗೆ ನಮ್ಮ ಮುಖ್ಯಮಂತ್ರಿಗಳು ಹಾಗೂ ಸಚಿವರ ಜತೆ ಚರ್ಚೆ ಮಾಡುತ್ತೇನೆ.

ಯಾರ ಬಳಿ ದೈವ ಗುಣಗಳಿವೆಯೋ, ಯಾರ ಬಳಿ ಶಾಂತ ಶಕ್ತಿ ಇದೆಯೋ, ಯಾರ ಬಳಿ ಸಂತೋಷದ ಔಷಧಿ ಇದೆಯೋ, ಯಾರ ಬಳಿ ಸತ್ಯತೆ ಶಕ್ತಿ ಇದೆಯೋ ಅಂತಹವರೇ ನಿಜವಾದ ಧನವಂತರು.

ಹೀಗಾಗಿ ಲೀಲಾವತಿ ಅವರ ಬಳಿ ಹಣವಿಲ್ಲದಿದ್ದರೂ ಅವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ಕೊಟ್ಟು ಹೋಗಿದ್ದಾರೆ. ಹೀಗಾಗಿ ನನ್ನ ಪ್ರಕಾರ ಲೀಲಾವತಿ ಅವರು ನಿಜಕ್ಕೂ ಧನವಂತರು.

ನಾನು ಶಾಲೆಯಲ್ಲಿ ಒಂದು ಶ್ಲೋಕ ಕಲಿತಿದ್ದೆ. ಈ ಸಂದರ್ಭದಲ್ಲಿ ಅದನ್ನು ಹೇಳಲು ಬಯಸುತ್ತೇನೆ.
ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ |
ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮ್ ಇದಂ ಶರೀರಮ್ ||

ಅಂದರೆ ಮರ ತನ್ನ ಸ್ವಂತಕ್ಕಿಂತ ಬೇರೆಯವರಿಗಾಗಿ ಇದೆ. ನದಿ ತನ್ನ ಸ್ವಂತಕ್ಕಿಂತ ಪ್ರಾಣಿ ಪಕ್ಷಿಗಳಿಗೆ, ರೈತರಿಗೆ ನೀರು ಒದಗಿಸುತ್ತದೆ. ಹಸು ಕೂಡ ಸ್ವಂತಕ್ಕಿಂತ ಬೇರೆಯವರಿಗೆ ಹಾಲು ಮೊಸರು, ಸಗಣಿ ನೀಡುತ್ತದೆ. ಅದೇ ರೀತಿ ಮನುಷ್ಯನ ದೇಹ ಕೂಡ ಪರೋಪಕಾರಕ್ಕೆ ಇದೆ ಎಂಬುದು ಈ ಶ್ಲೋಕದ ಅರ್ಥ. ಅದೇ ರೀತಿ ಲೀಲಾವತಿ ಅವರು ತಮ್ಮ ಬದುಕಲ್ಲಿ ಬೇರೆಯವರಿಗಾಗಿ ಶ್ರಮಿಸಿ, ತಮ್ಮದೇ ಆದ ಸಾಕ್ಷಿ ಗುಡ್ಡೆ ಬಿಟ್ಟುಹೋಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.