ಕುಂದಾಪುರ ಪಟ್ಟಣವನ್ನು ಕೇಂದ್ರ ಬಿಂದುವನ್ನಾಗಿಸಿಕೊಂಡು ಹೊಸ ಜಿಲ್ಲೆಯನ್ನಾಗಿ ಮಾಡುವ ಪ್ರಸ್ತಾಪ ಇಂದು ನಿನ್ನೆಯದಲ್ಲ. ಇದಕ್ಕೆ ದಶಕಗಳ ಇತಿಹಾಸ ಇದೆ. ಕರ್ನಾಟಕದ ಕರಾವಳಿಯ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಕುಂದಾಪುರವನ್ನು ಜಿಲ್ಲೆಯನ್ನಾಗಿ ಮಾಡಬೇಕು, ಈ ಮೂಲಕ ಇಲ್ಲಿನ ವಿದ್ಯಾವಂತ ಯುವ ಜನಾಂಗ ದೂರದ ಬೆಂಗಳೂರು, ಪುಣೆ, ಮುಂಬೈ, ಹೈದರಾಬಾದ್ ಮುಂತಾದ ಮಹಾ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಬೇಕು. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಜಿಲ್ಲೆಗಳ ಸಂಖ್ಯೆ ತೀರಾ ಕಡಿಮೆ. ಈ ನಿಟ್ಟಿನಲ್ಲಿ ಸಮಗ್ರ ಕರಾವಳಿಯ ಅದರಲ್ಲೂ ಪ್ರವಾಸೋದ್ಯಮ ಬೆಳವಣಿಗೆ ನಿಟ್ಟಿನಲ್ಲಿ ಕುಂದಾಪುರವನ್ನು ಜಿಲ್ಲೆಯನ್ನಾಗಿ ಮಾಡುವ ಮೂಲಕ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಸರಕಾರ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುವುದು ಕುಂದಾಪುರ ಜನತೆಯ ಆಶಯವಾಗಿದೆ.
ಮಹಾ ಚುನಾವಣೆ ಮತ್ತೆ ಬರುತ್ತಿದೆ.
ಮತದಾರರನ್ನು ಮತ್ತೆ ಭರವಸೆಗಳು ಸಮೀಪಿಸುತ್ತಿದೆ. ಅಭ್ಯರ್ಥಿಗಳ ಆಶ್ವಾಸನೆಗಿಂತ ಕೊಟ್ಟ ಮನವಿಗೆ ಸ್ಪಂದಿಸಿ ಈ ಬಾರಿ ಲೋಕಸಭಾ ಚುನಾವಣೆ ಬಹಳ ಹತ್ತಿರದಲ್ಲಿರುವುದರಿಂದ ನಮ್ಮ ಭಾಗದ ಬಹುಕಾಲದ ಬೇಡಿಕೆಗೆ ರಾಜಕೀಯ ಪಕ್ಷಗಳು ಈ ಬಾರಿ ಸ್ಪಂದನೆ ನೀಡಬೇಕಾಗಿದೆ. ಈ ಸಲ ಯಾವ ಪಕ್ಷದಿಂದ ಯಾವ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ ಎನ್ನುವುದಕ್ಕಿಂತ ಈ ಬಾರಿ ಚುನಾವಣೆ ಸಮಯದಲ್ಲಿ ಬಹು ವಿಶಾಲವಾಗಿ ಹರಡಿರುವ ಕುಂದಾಪುರ ಪ್ರದೇಶದ ಮೂರು ಬೇಡಿಕೆಯನ್ನು ಗಣನೆಗೆ ತೆಗೆದುಕೊಳ್ಳಬೇಕು.
ಒಂದು ಕುಂದಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವುದು, ಇನ್ನೊಂದು ಮೂಡ್ಲಕಟ್ಟೆ ರೈಲು ಮಾರ್ಗವನ್ನು ಮಾಸ್ತಿಕಟ್ಟೆ ಘಾಟಿ ಮುಖಾಂತರ ಶಿವಮೊಗ್ಗ ರೈಲು ಸಂಪರ್ಕಕ್ಕೆ ಬೆಸೆಯುವುದು, ಮೂರನೆಯದಾಗಿ ಅಂಪಾರು ಬಳಿ ಉಪ ಅಗ್ನಿಶಾಮಕ ದಳ ಕಚೇರಿ ನಿರ್ಮಾಣವಾಗುವುದು, ಇವು ಮೂರು ಕುಂದಾಪುರ ಕ್ಷೇತ್ರದ ಬಹು ಮುಖ್ಯ ಬೇಡಿಕೆಗಳು.
ಮುರುಡೇಶ್ವರದಿಂದ ಮಾಬುಕಳವಿನ ತನಕ, ನಿಟ್ಟೂರಿನಿಂದ ಬೈಂದೂರು ತನಕ, ಮಾಸ್ತಿಕಟ್ಟೆಯಿಂದ, ಕುಂದಾಪುರ ತನಕ, ಸೋಮೇಶ್ವರದಿಂದ ಕುಂದಾಪುರ ತನಕ ಈ ಎಲ್ಲಾ ಭಾಗವನ್ನು ಕುಂದಗನ್ನಡ ಮಾತನಾಡುವ, ಜನರನ್ನು ಒಗ್ಗೂಡಿಸುವ ಒಂದು ಜಿಲ್ಲೆಯೇ ಕುಂದಗನ್ನಡ ಜಿಲ್ಲೆ. ಈಗಿನ ಬೈಂದೂರು, ಕುಂದಾಪುರ, ಹೆಬ್ರಿ, ಬ್ರಹ್ಮಾವರ ತಾಲೂಕುಗಳ ಬಹುಜನರ ಆಡು ಭಾಷೆ ಪ್ರಧಾನವಾಗಿ ಕುಂದಾಪುರ ಕನ್ನಡ. ಇದು ಜನರನ್ನು ಅತ್ಯಂತ ಹತ್ತಿರ ತರುವಲ್ಲಿ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವುದು ಕಾಣುತ್ತೇವೆ.
ಸ್ವಾತಂತ್ರ್ಯ ಪೂರ್ವದಲ್ಲಿ ಕೃಷಿ ಚಟುವಟಿಕೆಯಲ್ಲಿ ಸಾಂಸ್ಕೃತಿಕ ನೆಲೆಯಲ್ಲಿ, ರಂಗಭೂಮಿ ಕ್ಷೇತ್ರದಲ್ಲಿ, ವಿವಿಧ ಕರಾವಳಿಯ ಕ್ರೀಡೆಗಳಲ್ಲೂ ಕುಂದಾಪುರವೇ ಮೇಲುಗೈ ಸಾಧಿಸಿತ್ತು ಎನ್ನುವುದನ್ನು ಗತಕಾಲದ ಇತಿಹಾಸ ಸಾರಿ ಸಾರಿ ಹೇಳುತ್ತದೆ.
ಕುಂದಾಪುರದಲ್ಲಿ ಬೆಳೆದ ರೈತನ ಅಕ್ಕಿ, ಕರಾವಳಿಯ ಪುತ್ತೂರು-ಸುಳ್ಯ ತನಕವು ಸರಬರಾಜಾಗುತ್ತಿತ್ತು, ಅಕ್ಕಿ ಮತ್ತು ಬೆಲ್ಲ ಬಸ್ರೂರಿನಿಂದ ಆಮದಾಗುತ್ತಿತ್ತು. ಕುಂದಾಪುರ ತಾಲೂಕಿನ ಗ್ರಾಮೀಣ ಭಾಗದ ಶಿರೂರು, ತೂದಹಳ್ಳಿ, ಬೈಂದೂರು, ಆರೆ ಶಿರೂರು, ಗಂಟಿಹೊಳೆ, ಮೆಟ್ಟಿನಹೊಳೆ, ಕೊಲ್ಲೂರು, ಮುದೂರು, ಕಾನ್ಮಕಿ , ಹೊಸಂಗಡಿ, ಯಡಮೊಗೆ, ಕಮಲಶಿಲೆ, ಬರೆಗುಂಡಿ, ಮಡಾಮಕ್ಕಿ, ಮಾಯಾ ಬಜಾರ್, ಶೇಡಿಮನೆ, ಅರಸಮ್ಮಕಾನು, ಆರ್ಡಿ, ಅಲ್ಬಾಡಿ, ಬೆಳ್ವೆ, ಗೋಳಿಯಂಗಡಿ ಈ ಭಾಗದ ಎಲ್ಲಾ ಗ್ರಾಮೀಣ ಜನರಿಗೆ ಕುಂದಾಪುರಕ್ಕೆ ಕನಿಷ್ಠ 50 ರಿಂದ 60 ಕಿಲೋ ಮೀಟರ್ ಆಗಬಹುದು. ಮತ್ತೆ ಕುಂದಾಪುರದಿಂದ ಉಡುಪಿಗೆ 37 ಕಿಲೋಮೀಟರ್. ಮಣಿಪಾಲಕ್ಕೆ ಮತ್ತೆ ಎರಡು ಕಿಲೋ ಮೀಟರ್. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು, ದೂರದೃಷ್ಟಿ ಇರುವ ನಾಯಕರು ಕುಂದಾಪುರ ಜಿಲ್ಲೆಗೆ ಅವಿರತವಾಗಿ ಪ್ರಯತ್ನಿಸಬೇಕಾಗಿ ಸಾರ್ವಜನಿಕರ ಪರವಾಗಿ ವಿನಂತಿಸುವೆ.
ಹಾಗೆಯೇ ಮೂಡ್ಲಕಟ್ಟೆಯಿಂದ ಈಗ ಬೆಂಗಳೂರಿಗೆ ಸಂಚರಿಸುವ ರೈಲು ಮಾರ್ಗ ನಿಜವಾಗಿಯೂ ರೈಲೊಂದು ಚಲಿಸುತ್ತಿದೆ ಇದರಲ್ಲಿ ಹೋಗಬೇಕು ಎನಿಸುವವರಿಗೆ ಇದರಿಂದ ಯಾರೊಬ್ಬರಿಗೂ ಅನುಕೂಲಕರವಲ್ಲ, ಇದೇ ಮಾರ್ಗವನ್ನು ಸುಬ್ರಮಣ್ಯತನಕ ಹೀಗೆ ಇರಲಿ, ಮುಂದೆ ಇದೇ ಮಾರ್ಗದಲ್ಲಿ ಕೇರಳಕ್ಕೂ ಸಂಪರ್ಕ ಅನುಕೂಲಕರ. ಆದರೆ ಮುರುಡೇಶ್ವರ ಮತ್ತು ಕಾರವಾರದಿಂದ ಬರುವ ಬೆಂಗಳೂರು ಪ್ರಯಾಣಿಕರಿಗೆ ಇದು ಅನಗತ್ಯದ ಯಾತ್ರೆ. ಇದೇ ಮಾರ್ಗವನ್ನು ಕುಂದಾಪುರ ಮೂಡ್ಲಕಟ್ಟೆಯಿಂದ ಹೊಸ ಮಾರ್ಗವನ್ನು ಶಿವಮೊಗ್ಗ ರೈಲು ಮಾರ್ಗಕ್ಕೆ ಸಂಪರ್ಕ ಕೊಂಡಿಯನ್ನಾಗಿ ಮಾಡಿದರೆ ಏಳು ತಾಸಿನಲ್ಲಿ ಬೆಂಗಳೂರು ತಲುಪಬಹುದು. ಉತ್ತರ ಕರ್ನಾಟಕ ತಲುಪುವುದು ಸಹ ಬಹಳ ಸುಗಮವಾಗುತ್ತದೆ. ಹಂಪಿ, ಬಳ್ಳಾರಿ, ಆಂಧ್ರ ಪ್ರದೇಶ ಗಡಿಯನ್ನು ಸಂಪರ್ಕಿಸಬಹುದು. ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಕೂಡ ಸಮೀಪವಾಗಬಹುದು. ಇದನ್ನೆಲ್ಲ ಬಿಟ್ಟು ಅಗತ್ಯ ಇಲ್ಲದ ಊರನ್ನೆಲ್ಲ ಸುತ್ತಿ ಬೆಂಗಳೂರಿಗೆ ತಲುಪುವುದು ಸಾಮಾನ್ಯ ಪ್ರಜ್ಞಾವಂತನಿಗೆ ಏನನಿಸಬಹುದು. ಬೇಡಿಕೆ ಇಡುವುದು ಸರ್ವೇ ಸಾಮಾನ್ಯ. ಅದು ಅಗತ್ಯತೆ ಮತ್ತು ಅನುಕೂಲ- ಅನಾನುಕೂಲ ಎರಡನ್ನು ವಿಮರ್ಶೆ ಮಾಡುವುದು ಸಂಬಂಧಪಟ್ಟವರಿಗೆ ಹಕ್ಕಿರುತ್ತದೆ. ಆದರೆ ಇದರಲ್ಲಿ ವಾಸ್ತವ ಸತ್ಯವನ್ನು ಪರಿಶೀಲಿಸಿದರೆ ಈ ಬೇಡಿಕೆ ತಕ್ಷಣವೇ ಮಂಜೂರು ಮಾಡುವಲ್ಲಿ ಕೇಂದ್ರ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬಹುದು.
ಇದರ ಜೊತೆ ಈಗ ಕುಂದಾಪುರದಲ್ಲಿ ಇರುವ ಅಗ್ನಿಶಾಮಕ ದಳ, ಅದು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಕುಂದಾಪುರದ ಒಂದು ಸಣ್ಣ ಸಂಪರ್ಕ ಕೋಣೆ ಮಾರ್ಗದಲ್ಲಿ ಇರುವ ಅಗ್ನಿಶಾಮಕ ದಳ ಕಚೇರಿ. ಅದು ಗ್ರಾಮೀಣ ಭಾಗದಲ್ಲಿ ಏನಾದರೂ ಅವಘಡ ಬೆಂಕಿ ದುರಂತವಾದಲ್ಲಿ ಈ ಅಗ್ನಿಶಾಮಕ ದಳದ ಲಾರಿ, ಅಥವಾ ವಾಹನ ಬರುವಷ್ಟರಲ್ಲಿ, ಇಲ್ಲಿ ನಡೆದ ದುರಂತವನ್ನು ಅಷ್ಟು ಸುಲಭದಲ್ಲಿ ನಿಯಂತ್ರಿಸುವುದು ಅಸಾಧ್ಯ. ಆದ್ದರಿಂದ ಅಂಪಾರು ಗ್ರಾಮೀಣ ಭಾಗದ ಮಧ್ಯ ಒಂದು ಉಪ ಅಗ್ನಿಶಾಮಕ ದಳ ಕಚೇರಿ ತೆರೆದರೆ ಇದರ ಅನುಕೂಲ ಆಗಬಹುದು.
ಹಾಲಾಡಿ, ಶಂಕರ ನಾರಾಯಣ, ಸಿದ್ದಾಪುರ, ಹೊಸಂಗಡಿ, ಕಂಡ್ಲೂರು, ಬಸ್ರೂರು, ಹುಣ್ಸೆಮಕ್ಕಿ, ಬಿದ್ಕಲ್ ಕಟ್ಟೆ, ಗುಲ್ವಾಡಿ, ಮಾವಿನಕಟ್ಟೆ, ನೇರಳಕಟ್ಟೆ , ಕೆಂಚನೂರು, ಕಾವ್ರಾಡಿ, ಹೆಮ್ಮಕಿ, ಆಜ್ರಿ, ಕೊಡ್ಲಾಡಿ, ವಂಡ್ಸೆ, ಚಿತ್ತೂರು, ಬಳ್ಕೂರು ಕಂದಾವರ ಇದಿಷ್ಟು ಗ್ರಾಮಗಳಿಗೂ ಕೇಂದ್ರ ಸ್ಥಾನ ಅಂಪಾರು.
ಹೀಗಾಗಿ ಸರಕಾರ ಕುಂದಾಪುರ ಅದರಲ್ಲೂ ಕುಂದಗನ್ನಡ ಮಾತನಾಡುವ ಪ್ರದೇಶದ ಜನತೆಯ ಬಹುಕಾಲದ ಮನವಿಗೆ ಸ್ಪಂದಿಸಬೇಕು ಎನ್ನುವುದು ಜನತೆಯ ಒತ್ತಾಸೆಯಾಗಿದೆ.
✒️ ಮುಂಬಾರು ದಿನಕರ ಶೆಟ್ಟಿ