ಮುಂಬೈ: ಹೆಂಡತಿ ಮೂರನೇ ಬಾರಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಪೆಟ್ರೋಲ್ ಸುರಿದು ಸುಟ್ಟು ಹಾಕಿದ ಘಟನೆ ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಕುಂಡ್ಲಿಕ ಉತ್ತಮ ಕಾಳೆ (32) ಗುರುವಾರ ರಾತ್ರಿ ಇಲ್ಲಿಂದ 520 ಕಿಲೋಮೀಟರ್ ದೂರದಲ್ಲಿರುವ ಗಂಗಾಖೇಡ ನಾಕಾದಲ್ಲಿ ತನ್ನ ಪತ್ನಿ ಮೈನಾಳನ್ನು ಕೊಂದಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮೈನಾ ಅವರ ಸಹೋದರಿ ನೀಡಿದ ದೂರಿನ ಪ್ರಕಾರ, ಆರೋಪಿ ಮೂವರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಬಗ್ಗೆ ತನ್ನ ಹೆಂಡತಿಯನ್ನು ನಿಂದಿಸುತ್ತಿದ್ದನು ಮತ್ತು ಈ ವಿಷಯವಾಗಿ ಆಗಾಗ್ಗೆ ಅವಳೊಂದಿಗೆ ಜಗಳವಾಡುತ್ತಿದ್ದನು ಎಂದು ಅಧಿಕಾರಿ ತಿಳಿಸಿದ್ದಾರೆ.
“ಗುರುವಾರ ರಾತ್ರಿ, ಅಂತಹ ಒಂದು ಜಗಳದ ನಂತರ, ಆತ ಅವಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಅವಳು ಕಿರುಚುತ್ತಾ ಮನೆಯಿಂದ ಹೊರಗೆ ಓಡಿಬಂದಳು. ಅಲ್ಲಿ ಜನರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು, ಆದರೆ, ಅವಳು ತೀವ್ರವಾಗಿ ಸುಟ್ಟುಹೋಗಿದ್ದಳು. ಮತ್ತು ಆಸ್ಪತ್ರೆಗೆ ಸಾಗಿಸುವಾಗ ಸಾವಿಗೀಡಾದಳು ಎಂದು ಅಧಿಕಾರಿ ಹೇಳಿದರು.

ಕೊಲೆ ಆರೋಪಿ ಕಾಳೆಯನ್ನು ಬಂಧಿಸಲಾಗಿದೆ ಎಂದು ಗಂಗಾಖೇಡ್ ಪೊಲೀಸ್ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.