ಜೇವರ್ಗಿ :
ಪಟ್ಟಣದ ಅಲ್ಪಸಂಖ್ಯಾತರ ಮೆಟ್ರಿಕ್‌ ನಂತರದ ಬಾಲಕಿಯರ ವಸತಿ ನಿಲಯದ ಸ್ನಾನಗೃಹಕ್ಕೆ ಕ್ಯಾಮೆರಾ ಅಳವಡಿಸಿದ್ದ ವ್ಯಕ್ತಿಯೊಬ್ಬನನ್ನು ಜೇವರ್ಗಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ವಸತಿ ನಿಲಯಕ್ಕೆ ಕ್ಯಾಮೆರಾ ಅಳವಡಿಸಿದ ವ್ಯಕ್ತಿಯನ್ನು ಸಲೀಂ ಅಲಿ ಎಂದು ಗುರುತಿಸಲಾಗಿದೆ. ವಸತಿ ನಿಲಯದ ಪಕ್ಕದ ಕಟ್ಟಡದಲ್ಲಿ ಬಾಡಿಗೆ ಪಡೆದಿದ್ದ ಆರೋಪಿ ಮೂಲತಃ ಮಂದೇವಾಲ ಗ್ರಾಮದವನಾಗಿದ್ದು, ಬೆಳ್ಳುಳ್ಳಿ ವ್ಯಾಪಾರ ಮಾಡಿಕೊಂಡಿದ್ದ.

ಪಕ್ಕದ ವಸತಿ ನಿಲಯದ ಸ್ನಾನಗೃಹದ ಕಿಟಕಿಯಿಂದ ಪೈಪ್ ಬಳಸಿ ಅದಕ್ಕೆ ವೈಫೈ ಕ್ಯಾಮೆರಾ ಅಳವಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅದೃಷ್ಟವಶಾತ್ ಈ ಕ್ಯಾಮೆರಾ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರ ಕಣ್ಣಿಗೆ ಬಿದ್ದು ಮೇಲ್ವಿಚಾರಕರ ಗಮನಕ್ಕೆ ತಂದಾಗ ಮೇಲ್ವಿಚಾರಕರು ಆರೋಪಿಯನ್ನು ಥಳಿಸಿ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.