ಬೆಳಗಾವಿ :

ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಾಹಿತ ಪ್ರೇಮಿಗಳು ಪರಾರಿಯಾದ ಘಟನೆ ನಡೆದಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹುಕ್ಕೇರಿ ತಾಲೂಕಿನ ಜಿನ್ರಾಳ ಗ್ರಾಮದಲ್ಲಿ ಇಬ್ಬರು ವಿವಾಹಿತರ ನಡುವಿನ ಪ್ರೇಮ ಕಥೆ. ಆದರೆ, ಸಮಸ್ಯೆ ಆಗಿದ್ದು ವೃದ್ಧ ಅಜ್ಜಿ, ತಾಯಿ ಮತ್ತು ಇತರರಿಗೆ. ಆತ ಇನ್ನೊಬ್ಬನ ಹೆಂಡತಿಯನ್ನು ಹಾರಿಸಿಕೊಂಡು ಹೋಗಿದ್ದ. ಇದರಿಂದ ಸಿಟ್ಟಿಗೆದ್ದ ಗಂಡ ಆತನ ಮನೆಯನ್ನೇ ಧ್ವಂಸಗೊಳಿಸಲು ಮುಂದಾಗಿದ್ದಾನೆ.

ಮನೆಯ ಮೇಲೆ ಕಲ್ಲು ತೂರಿ, ಪೀಠೋಪಕರಣ, ಅಡುಗೆ ಸಾಮಗ್ರಿ ಸೇರಿದಂತೆ ಎಲ್ಲ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ.

30ಕ್ಕೂ ಅಧಿಕ ಜನರು ಇರುವ ತಂಡ ಮನೆಯ ಮೇಲೆ ದಾಳಿ ಮಾಡಿದೆ. ದುಷ್ಕರ್ಮಿಗಳು ಕೈಯಲ್ಲಿ ಕುಡುಗೋಲು, ಕೊಡ್ಲಿ, ಕಟ್ಟಿಗೆ ಹಿಡಿದುಕೊಂಡು ದಾಳಿ ಮಾಡಿದ್ದಾರೆ.

ಹುಕ್ಕೇರಿ ತಾಲೂಕಿನ ಜಿನ್ರಾಳ ಗ್ರಾಮದಲ್ಲಿ ಇಬ್ಬರು ವಿವಾಹಿತೆ ತಾನು ಪ್ರೇಮಿಸುತ್ತಿದ್ದ ವಿವಾಹಿತ ಪುರುಷನೊಂದಿಗೆ ಪರಾರಿಯಾಗಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಗಂಡನ ಮನೆಯವರು ಪ್ರೇಮಿ ಯುವಕನ ಮನೆಗೆ ತಂಡ ಕಟ್ಟಿಕೊಂಡು ಹೋಗಿ ದಾಳಿ ಮಾಡಿದ್ದಾರೆ.

ಜಿನ್ರಾಳದ ರೇಣುಕಾ ವಾಲಿಕಾರ ಮತ್ತು ಲಗಮಣ್ಣ ವಾಲಿಕಾರ (34) ಎಂಬವರ ಮಧ್ಯೆ ಕಳೆದ ಕೆಲವು ಸಮಯದಿಂದ ಪ್ರೀತಿ-ಪ್ರಣಯ ಹರಡಿತ್ತು. ರೇಣುಕಾಗೆ ಮದುವೆಯಾಗಿ ಇಬ್ಬರು ಮಕ್ಕಳು ಇದ್ದಾರೆ. ಲಗಮಣ್ಣ ವಾಲಿಕಾರ ವಿವಾಹಿತ. ಅವನಿಗೆ ಮಗನಿದ್ದಾನೆ. ಅವರಿಬ್ಬರೂ ಪರಸ್ಪರ ಮಾತನಾಡಿಕೊಂಡು ಮಂಗಳವಾರ ರಾತ್ರಿ ಊರಿಂದಲೇ ಪರಾರಿಯಾಗಿದ್ದಾರೆ. ಇದರಿಂದ ಕೆರಳಿದ ಗಂಡನ ಮನೆಯವರು ರೇಣುಕಾಳ ಪ್ರೇಮಿಯ ಮನೆ ಮೇಲೆ ದಾಳಿ ಮಾಡಿದ್ದಾರೆ.

ಲಗಮಣ್ಣ ವಾಲಿಕಾರ ಮನೆಯಲ್ಲಿ ತಾಯಿ ಶಾಂತವ್ವ ಮತ್ತು ಇತರರು ವಾಸವಾಗಿದ್ದಾರೆ. ರೇಣುಕಾ ಲಗಮಣ್ಣ ಜತೆ ಪರಾರಿಯಾಗಿದ್ದನ್ನು ತಿಳಿದ ಗಂಡನ ಮನೆಯವರು ಸೇರಿ ಶಾಂತವ್ವ ವಾಸವಿದ್ದ ಮನೆ ಮೇಲೆ ದಾಳಿ ಮಾಡಿದ್ದಾರೆ.

ಮನೆಯಲ್ಲಿ ಲಗಮಣ್ಣ ವಾಲೀಕಾರನ ತಾಯಿ, ಅಜ್ಜಿ ಮತ್ತು ಹೆಂಡತಿ ಹಾಗೂ ಮಗ ಇದ್ದರು. ಅವರು ಹತ್ತಾರು ಮಂದಿ ಮನೆಯತ್ತ ಧಾವಿಸಿ ಬರುತ್ತಿರುವ ಸುದ್ದಿ ಕೇಳಿ ಪಕ್ಕದ ಮನೆಯಲ್ಲಿ ಅಡಗಿ ಕುಳಿತಿದ್ದರು. ಹೀಗಾಗಿ ಅವರ ಪ್ರಾಣಕ್ಕೆ ಏನೂ ಅಪಾಯ ಉಂಟಾಗಿಲ್ಲ.

ಮಗ ಮಾಡಿದ ತಪ್ಪಿಗೆ ತಾಯಿಯ ಮನೆಯನ್ನ ನಾಶ ಮಾಡಿದ ದುಷ್ಕರ್ಮಿಗಳು ಮನೆಯನ್ನು ಬಹುತೇಕ ಧ್ವಂಸಗೊಳಿಸಿದ್ದಾರೆ. ಇದರ ಜತೆಗೆ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಮಹಿಳೆಯ ಮಾವ ಸಾಮಯ್ಯ ವಾಲಿಕಾರ, ಕೆಂಪಣ್ಣ ವಾಲಿಕಾರ, ರೇಣುಕಾ ಗಂಡ ದುಂಡಪ್ಪ ಫಕ್ಕೀರಪ್ಪ ವಾಲಿಕಾರ, ಭಾಮೈದ ನಿಂಗಪ್ಪ ವಾಲಿಕಾರ, ಭರಮಾ ವಾಲಿಕಾರ, ಹನುಮಂತ ಲಗಮಾ ವಾಲಿಕಾರ, ನಿಂಗಪ್ಪ ಲಗಮಾ ವಾಲಿಕಾರ, ಲಗಮಾ ಯಲಗುಂಡ ವಾಲಿಕಾರ ಸೇರಿ ಹಲವರಿಂದ ದಾಳಿ ನಡೆದಿದೆ ಎಂದು ದೂರು ನೀಡಲಾಗಿದೆ.