ಬೆಂಗಳೂರು:
ಚೀನಾದಲ್ಲಿ ಸೋಂಕಿನಿಂದಾಗಿ ಮಕ್ಕಳಲ್ಲಿ ಉಸಿರಾಟದ ತೊಂದರೆ ಉಲ್ಬಣದ ವರದಿಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಸಾರ್ವಜನಿಕ ಆರೋಗ್ಯ ಮತ್ತು ಆಸ್ಪತ್ರೆಯ ಸನ್ನದ್ಧತೆಯ ಕ್ರಮಗಳನ್ನು ತಕ್ಷಣವೇ ಪರಿಶೀಲಿಸುವಂತೆ ಕೇಂದ್ರ ಸರ್ಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದ ನಂತರ ರಾಜ್ಯ ಆರೋಗ್ಯ ಇಲಾಖೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ. ರಂದೀಪ್ ಅವರು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇದು ಸಾಮಾನ್ಯ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಕಡಿಮೆ ತೀವ್ರತೆ ಹೊಂದಿದೆ. ಇದು ಸಾಮಾನ್ಯವಾಗಿ ಐದರಿಂದ ಏಳು ದಿನಗಳವರೆಗೆ ಇರುತ್ತದೆ. ಇದು ಮಕ್ಕಳಿಗೆ, ವೃದ್ಧರಿಗೆ, ಗರ್ಭಿಣಿಯರಿಗೆ, ಇಮ್ಯುನೊಕೊಂಪ್ರೊಮೈಸ್ಡ್ ಮತ್ತು ದೀರ್ಘಕಾಲೀನ ಔಷಧಿಗಳಾದ ಸ್ಟೆರಾಯ್ಡ್‌ಗಳನ್ನು ತೆಗೆದುಕೊಳ್ಳುವವರಿಗೆ ಹೆಚ್ಚಿನ ಅಪಾಯವನ್ನುಂಟುಮಾಡುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಮಾರ್ಗಸೂಚಿಗಳು….
ಕೆಮ್ಮುವಾಗ, ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು.
ಕಣ್ಣು, ಮೂಗು, ಬಾಯಿಯನ್ನು ಅನಗತ್ಯವಾಗಿ ಸ್ಪರ್ಶಿಸಿಕೊಳ್ಳಬಾರದು.
ಸಾಬೂನು ಮತ್ತು ನೀರಿನಿಂದ ಆಗಾಗ ಕೈ ತೊಳೆಯಬೇಕು.
ಇನ್ ಫ್ಲುಯೆಂಜಾ ಇತರೆ ಉಸಿರಾಟ ಕಾಯಿಲೆಗಳ ಹೆಚ್ಚಿನ ಸಂಭವ ಇರುವ ಸ್ಥಳಗಳಿಗೆ ಹೋಗಬೇಡಿ.
ಜನಸಂದಣಿ ಇರುವ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ, ಹೋಗುವುದಾದರೆ ಮಾಸ್ಕ್ ಬಳಸಬೇಕು.
ನಿದ್ದೆ ಮಾಡಿ, ದೈಹಿಕವಾಗಿ ಕ್ರಿಯಾಶೀಲರಾಗಿ, ಒತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸಬೇಕು.
ಸಾಕಷ್ಟು ನೀರು, ಪೌಷ್ಟಿಕ ಆಹಾರ ಸೇವಿಸಬೇಕು.
ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು
ರೋಗಲಕ್ಷಣ ಉಲ್ಬಣಗೊಂಡರೆ ಸಮೀಪದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ.
ವೈದ್ಯರನ್ನು ಸಂಪರ್ಕಿಸದೆ ಸ್ವಯಂ ಔಷಧಿಗಳನ್ನು ತೆಗೆದುಕೊಳ್ಳಬೇಡಿ.