ದೆಹಲಿ:
ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿರುವ ಸಿಲ್ಕ್ಯಾರಾದ ಸುರಂಗ ಜ. 12ರಂದು ಕುಸಿದ ಪರಿಣಾಮ 41 ಕಾರ್ಮಿಕರು ಅದರೊಳಗೆ ಸಿಲುಕಿದ್ದರು. ಕೊನೆಗೂ ಅವರನ್ನು ಕೊರತರುವ ಕಾರ್ಯ ಜೋರಾಗಿ ನಡೆದಿದ್ದು ಇದೀಗ ಐವರು ಕಾರ್ಮಿಕರನ್ನು ಸುರಂಗದಿಂದ ಹೊರ ತರಲಾಗಿದೆ.

ಕಳೆದ 17 ದಿನಗಳಿಂದ ಕಾರ್ಮಿಕರನ್ನು ಹೊರಕ್ಕೆ ತರುವ ಕಾರ್ಯ ನಿರಂತರವಾಗಿ ಸಾಗಿದೆ. ಯಂತ್ರಗಳು ಕೈಕೊಟ್ಟ ನಂತರ ಇದೀಗ ನಿಷೇಧಿತ ಇಲಿ ಬಿಲ ಗಣಿಗಾರಿಕೆ ತಂತ್ರಜ್ಞಾನವನ್ನು ಬಳಸಿಕೊಂಡು ಸುರಂಗ ಕೊರೆಯುವ ಕಾರ್ಯ ಪ್ರಗತಿಯಲ್ಲಿದೆ.

ಕೇಂದ್ರ ಸರ್ಕಾರದ ಪ್ರತಿಷ್ಠಿತ ಚಾರ್‌ ಧಾಮ್‌ ಯೋಜನೆಯ ಭಾಗವೇ ಈ 4.5 ಕಿ.ಮೀ. ಉದ್ದದ ಸಿಲ್ಕ್ಯಾರಾದ ಸುರಂಗ. ಉತ್ತರಾಖಂಡ– ಬದರಿನಾಥ, ಕೇದಾರನಾಥ, ಗಂಗೋತ್ರಿ, ಯಮುನೋತ್ರಿಗಳಿಗೆ ಎಲ್ಲಾ ಋತುವಿನಲ್ಲೂ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸಿಲ್ಕ್ಯಾರಾ ಸುರಂಗ ಎಂದೇ ಕರೆಯಲಾಗುವ ಈ ರಸ್ತೆ ಯೋಜನೆಯನ್ನು ಕೇಂದ್ರ ಕೈಗೆತ್ತಿಕೊಂಡಿತು.

ಈ ಸುರಂಗವು ಸಿಲ್ಕ್ಯಾರಾದಿಂದ ದಾಂಡಲಗಾಂವ್‌ಗೆ ಸಂಪರ್ಕ ಕಲ್ಪಿಸಲಿದೆ. ಎರಡು ಲೇನ್‌ ಹೊಂದಿರುವ ಇದು ಚಾರ್‌ಧಾಮ್‌ ಯೋಜನೆಯಲ್ಲಿ ಅತ್ಯಂತ ಉದ್ದನೆಯ ಸುರಂಗವಾಗಿದೆ. ಸದ್ಯ ಸಿಲ್ಕ್ಯಾರಾದ ಕಡೆಯಿಂದ 2.4 ಕಿ.ಮೀ. ಹಾಗೂ ಮತ್ತೊಂದು ಬದಿಯಿಂದ 1.75 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ. ಈ ರಸ್ತೆ ಕಾಮಗಾರಿ ಪೂರ್ಣಗೊಂಡಲ್ಲಿ ಸುಮಾರು ಒಂದು ಗಂಟೆಯ ಪ್ರಯಾಣ ಅವಧಿ ಕಡಿತಗೊಳ್ಳಲಿದೆ. ಈ ಸುರಂಗದ ಕಾಮಗಾರಿಯನ್ನು ಹೈದರಾಬಾದ್ ಮೂಲದ ನವಯುಗ್ ಎಂಜಿನಿಯರಿಂಗ್ ಕಂಪನಿ ವಹಿಸಿಕೊಂಡಿದೆ.