ಬೆಂಗಳೂರು: ಸಹಾಯ ಕೇಳಲು ಹೋಗಿದ್ದ 17 ವರ್ಷದ ಬಾಲಕಿ ಮೇಲೆ‌ ಲೈಂಗಿಕ‌ ದೌರ್ಜನ್ಯ ಎಸಗಿದ್ದ ಆರೋಪದಡಿ ಬಿ.ಎಸ್. ಯಡಿಯೂರಪ್ಪ (81) ಅವರ ವಿರುದ್ಧ‌ ಎಫ್ಐಆರ್ ದಾಖಲಾಗಿದೆ.

ಬಾಲಕಿಯ ತಾಯಿ ನೀಡಿರುವ ದೂರಿನಡಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಗುರುವಾರ (ಮಾರ್ಚ್ 14) ಪ್ರಕರಣ ದಾಖಲಾಗಿದೆ.

‘ಮಕ್ಕಳ ಮೇಲಿನ ಲೈಂಗಿಕ‌ ದೌರ್ಜನ್ಯ ತಡೆ ಕಾಯ್ದೆಯಡಿ (ಪೋಕ್ಸೊ) ಪ್ರಕರಣ ದಾಖಲಾಗಿದೆ. ಬಾಲಕಿಯ ತಾಯಿ ಗುರುವಾರ ರಾತ್ರಿ ಠಾಣೆಗೆ ದೂರು ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಇದೇ ಫೆಬ್ರುವರಿ 2ರಂದು ಸಹಾಯ ಕೇಳಲು ಹೋಗಿದ್ದ ವೇಳೆ ಯಡಿಯೂರಪ್ಪ ಅವರು ಬಾಲಕಿಯನ್ನು ಕೊಠಡಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರಿ‌ನಲ್ಲಿ ಆರೋಪಿಸಲಾಗಿದೆ.

‘ಮಗಳ ಮೇಲೆ ಅತ್ಯಾಚಾರ ಆಗಿತ್ತು. ಮಗಳಿಗೆ ನ್ಯಾಯ ಕೊಡಿಸುವಂತೆ ಹಾಗೂ ಪ್ರಕರಣದ ತನಿಖೆಗೆ ಎಸ್ಐಟಿ‌ ರಚಿಸುವಂತೆ ಸರ್ಕಾರದ‌ ಮೇಲೆ ಒತ್ತಡ ಹೇರುವಂತೆ ಕೋರಿ ಯಡಿಯೂರಪ್ಪ‌ ಬಳಿ ಹೋಗಿದ್ದೆ. ಅದೇ ಸಂದರ್ಭದಲ್ಲಿ ನನ್ನ 17 ವರ್ಷದ ಮಗಳ‌ ಮೇಲೆ ಯಡಿಯೂರಪ್ಪ ‌ಲೈಂಗಿಕ‌ ದೌರ್ಜನ್ಯ ಎಸಗಿದ್ದಾರೆ. ವಿಷಯ ಯಾರಿಗೂ ತಿಳಿಸದಂತೆ ನನ್ನನ್ನು ತಡೆದಿದ್ದರು. ಬಾಲಕಿ ಭಯಗೊಂಡಿದ್ದರಿಂದ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ’ ಎಂದು ಬಾಲಕಿಯ ತಾಯಿ ದೂರಿನಲ್ಲಿ‌ ತಿಳಿಸಿದ್ದಾರೆ.