ಬೆಳಗಾವಿ :ಮಾಜಿ ಸಿಎಂ ಹಾಗೂ ನಮ್ಮ ಬೀಗರಾದ ಜಗದೀಶ ಶೆಟ್ಟರ್ ನಮ್ಮ ಮನೆಯವರೇ ಆಗಿದ್ದಾರೆ. ಅವರಿಗೆ ಟಿಕೆಟ್ ಸಿಕ್ಕಿದರೆ ಬೇಸರ ಇಲ್ಲ. ಅವರ ಪರವಾಗಿ ಮುಕ್ತ ಮನಸ್ಸಿನಿಂದ ಪ್ರಚಾರ ಕೈಗೊಳ್ಳುವೆ…

ಹೀಗೆಂದು ಅಭಯ ನೀಡಿದವರು ಬೆಳಗಾವಿಯ ಹಾಲಿ ಸಂಸದೆ ಮಂಗಲಾ ಅಂಗಡಿ.

ಮಾಜಿ ಸಿಎಂ ಜಗದೀಶ ಶೆಟ್ಟರ್ ಸಹ ನಮ್ಮ ಮನೆಯವರೇ. ಅವರ ಪರವಾಗಿ ನಾವು ಮುಕ್ತ ಮನಸ್ಸಿನಿಂದ ಪ್ರಚಾರ ಮಾಡುತ್ತೇವೆ ಎಂದು ಹೇಳಿದರು.

ಬಿಜೆಪಿ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ. ಎರಡನೇ ಪಟ್ಟಿಯಲ್ಲಿ ನಮ್ಮ ಹೆಸರು ಇರಲಿಲ್ಲ ಎಂದು ತಿಳಿದು ವರಿಷ್ಠರ ಭೇಟಿಗೆ ದೆಹಲಿಗೆ ಹೋಗಿದ್ದೆ. ಆದರೆ ಅಷ್ಟರಲ್ಲೇ ಜಗದೀಶ ಶೆಟ್ಟರ್ ಹೆಸರು ಅಂತಿಮವಾಗಿದೆ ಎಂದು ತಿಳಿದು ಬಂದಿದೆ. ಪಕ್ಷದ ವರಿಷ್ಠರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ಧ. ನಮ್ಮ ಕುಟುಂಬದಲ್ಲಿ ನನಗೆ ಅಥವಾ ಮಕ್ಕಳಿಗೆ ಟಿಕೆಟ್ ಸಿಗಬೇಕು ಎಂಬ ಆಸೆ ಇತ್ತು. ಈಗ ಸಹಾ ಬಿಜೆಪಿ ಪಟ್ಟಿಯಲ್ಲಿ ನಮ್ಮ ಹೆಸರು ಇವೆ, ಇನ್ನು ಆಸೆ ಕಳೆದುಕೊಂಡಿಲ್ಲ. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಜಗದೀಶ ಶೆಟ್ಟರ್ ಅವರ ಹೆಸರು ಬಹುತೇಕ ಅಂತಿಮಗೊಂಡಿದ್ದು ವರಿಷ್ಟರು ಸಹಾ ಒಪ್ಪಿಗೆ ನೀಡಿದ್ದಾರೆ, ಇದರಿಂದ ನಮಗೆ ಯಾವ ಬೇಸರ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.