ಚಿತ್ರದುರ್ಗ:
ನಗರದ ಮನೆಯೊಂದರಲ್ಲಿ ಕೆಲವು ಅಸ್ಥಿಪಂಜರಗಳು ಪತ್ತೆಯಾಗಿದ್ದು, ತಲ್ಲಣ ಸೃಷ್ಟಿಸಿದೆ.

ನಿವೃತ್ತ ಇಂಜಿನಿಯರ್ ಜಗನ್ನಾಥ ರೆಡ್ಡಿ ಎಂಬುವವರಿಗೆ ಈ ಮನೆ ಸೇರಿದ್ದು, ಹಲವು ವರ್ಷಗಳಿಂದ ಜಗನ್ನಾಥ ರೆಡ್ಡಿ ಕುಟುಂಬ ಎಲ್ಲಿಯೂ ಕಂಡು ಬಂದಿಲ್ಲ ಎಂದು ಸಂಬಂಧಿಕರು, ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಕಳೆದ ನಾಲ್ಕೈದು ವರ್ಷಗಳಿಂದ ಈ ಮನೆಯ ಬಾಗಿಲು ತೆರೆದಿರಲಿಲ್ಲ. 2019 ರಲ್ಲಿ ಮನೆಯಿಂದ ವಾಸನೆ ಬಂದಿತ್ತು, ಇಲಿ ಸತ್ತಿರಬಹುದು ಎಂದು ಜನ ಸುಮ್ಮನಾಗಿದ್ದಾರೆ.

ಇತ್ತೀಚೆಗೆ ಕಳ್ಳತನ ಮಾಡಲು ಮನೆಯ ಹಿಂದಿನ ಬಾಗಿಲು ಒಡೆಯಲಾಗಿದೆ. ಆನಂತರ ಯಾರೋ ಮನೆಗೆ ಭೇಟಿ ನೀಡಿದ್ದಾಗ ಶವಗಳು ಪತ್ತೆಯಾಗಿವೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ಆರಂಭವಾಗಿದೆ.

ಈ ಮನೆಯಲ್ಲಿ ಸುಮಾರು 80 ವರ್ಷದ ಜಗನ್ನಾಥ ರೆಡ್ಡಿ, ಅವರ ಪತ್ನಿ ಸುಮಾರು 70 ವರ್ಷದ ಪ್ರೇಮಾ, ಇವರ ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣರೆಡ್ಡಿ, ನರೇಂದ್ರ ರೆಡ್ಡಿ ವಾಸವಿದ್ದರು. ಇವರ ಹಿರಿಯ ಪುತ್ರ ಮಂಜುನಾಥ ರೆಡ್ಡಿ ಎಂಬುವವರು ಹಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಜಗನ್ನಾಥ ರೆಡ್ಡಿ ಅವರ ಸಂಬಂಧಿಕರಾದ ಪವನ್ ಕುಮಾರ್ ಎಂಬುವವರು ಘಟನೆ ಬೆಳಕಿಗೆ ಬಂದ ನಂತರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮನೆಯಲ್ಲಿ ಅಸ್ಥಿಪಂಜರಗಳು ಇರುವುದು ಗುರುವಾರ ರಾತ್ರಿ ಗೊತ್ತಾಗಿದೆ. ಚಳ್ಳಕೆರೆ ಗೇಟ್ ಸಮೀಪದಲ್ಲಿ ಜಗನ್ನಾಥ ರೆಡ್ಡಿ ಎಂಬ ನಾಮಫಲಕ ಇರುವ ಪಾಳು ಮನೆಯಲ್ಲಿ ಇವು ಪತ್ತೆಯಾಗಿವೆ.

ಹಲವು ವರ್ಷಗಳಿಂದ ಮನೆಗೆ ಬೀಗ ಹಾಕಲಾಗಿತ್ತು. ಈ ಹಿಂದೆ ಸ್ಥಳೀಯರು ಮನೆಯಿಂದ ವಾಸನೆ ಬರುತ್ತಿದೆ ಎಂದು ಮಾತನಾಡಿಕೊಂಡು ಸುಮ್ಮನಾಗಿದ್ದರು. ಬಡಾವಣೆ ಪೊಲೀಸರು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಸ್ಥಿಪಂಜರಗಳು ಇರುವುದು ಖಚಿತವಾಗಿದೆ.

ಶವಗಳು ಸಂಪೂರ್ಣ ಕೊಳೆತಿದ್ದು, ಮೂಳೆ ಕಾಣುವ ಸ್ಥಿತಿಯಲ್ಲಿ ಪತ್ತೆಯಾಗಿವೆ. ಸ್ಥಳದಲ್ಲಿ ಶ್ವಾನದಳ ಪರಿಶೀಲನೆ ನಡೆಸಿತು.

ಮೂವರು ಅಂದಾಜು ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ನಾಗರಿಕರು ಜಮಾಯಿಸಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮನೆ ಮುಂದೆ ಬ್ಯಾರಿಕೇಡ್ ಅಳವಡಿಸಿದ್ದಾರೆ.

ಸ್ಥಳಕ್ಕೆ ಡಿವೈಎಸ್ಪಿ ಅನಿಲ್ ಕುಮಾರ್, ಸಿಪಿಐ ನಹಿಂ ಅಹಮದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮನೆಗೆ ಯಾರ ಪ್ರವೇಶಿಸುವಂತಿರಲಿಲ್ಲ !

ಪಾಳು ಬಿದ್ದ ಮನೆಯಲ್ಲಿ 5 ಅಸ್ಥಿಪಂಜರ ಪತ್ತೆಯಾಗಿದ್ದು, ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣ ಪೊಲೀಸರು ಸೇರಿದಂತೆ ಊರಿನವರನ್ನೂ ಬೆಚ್ಚಿ ಬೀಳಿಸಿದೆ. ನಗರದ ನಡುವೆಯೇ ಇದ್ದರೂ ಇದು ವರ್ಷಗಳಿಂದ ಯಾರ ಗಮನಕ್ಕೂ ಬರದಿರುವುದು ಇನ್ನೂ ನಿಗೂಢವಾಗಿದೆ.

ಚಿತ್ರದುರ್ಗದ ಚಳ್ಳಕೆರೆ ಗೇಟ್‌ನಲ್ಲಿರುವ, ಹಳೆ ಬೆಂಗಳೂರು ರಸ್ತೆಯ ಬದಿ ಇರುವ ಪಾಳು ಬಿದ್ದ ಮನೆಯಲ್ಲಿ 5 ಅಸ್ಥಿಪಂಜರ ಕಂಡುಬಂದಿವೆ. ಚಿತ್ರದುರ್ಗದ ದೊಡ್ಡ ಸಿದ್ದವ್ವನಹಳ್ಳಿಯ ಜಗನ್ನಾಥ್ ರೆಡ್ಡಿ ಎಂಬವರಿಗೆ ಸೇರಿದ ಮನೆ ಇದಾಗಿದೆ. ಇವರು ಪಿಡಬ್ಲ್ಯುಡಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿದ್ದು ನಿವೃತ್ತರಾಗಿದ್ದರು. ಮನೆಯ ಮುಂದೆ ನಿವೃತ್ತ ಇಂಜಿನಿಯರ್ ಎಂಬ ಬೋರ್ಡ್ ಇದೆ.

ಎಲ್ಲವೂ ಒಂದೇ ಕುಟುಂಬಸ್ಥರ ಶವಗಳು, ಸುಮಾರು 4 ವರ್ಷಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಇದೀಗ ಶಂಕಿಸಲಾಗಿದೆ. ಜಗನ್ನಾಥ ರೆಡ್ಡಿ, ಪತ್ನಿ ಪ್ರೇಮಾ ಹಾಗೂ ಮಗಳು ಮೃತಪಟ್ಟಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಜಗನ್ನಾಥ ರೆಡ್ಡಿಗೆ 3 ಜನ ಗಂಡು ಮಕ್ಕಳು ಹಾಗೂ ಒಬ್ಬರು ಹೆಣ್ಣು ಮಗಳು ಎಂದು ಹೇಳಲಾಗಿದೆ. ಕುಟುಂಬಸ್ಥರಿಗೆ ಗಂಭೀರ ಆರೋಗ್ಯ ಸಮಸ್ಯೆ ಇತ್ತು ಎಂಬ ಮಾಹಿತಿಯಿದೆ.

ಜಗನ್ನಾಥ ರೆಡ್ಡಿಯವರ ಪತ್ನಿ ಅಸ್ವಸ್ಥರಾಗಿದ್ದು , 2 ಕೋಟಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ದರೂ ಫಲಕಾರಿಯಾಗಿರಲಿಲ್ಲ. ಈ ಮನೆಯವರು ಯಾರನ್ನೂ ಒಳಬಿಟ್ಟುಕೊಳ್ಳುತ್ತಿರಲಿಲ್ಲ. ಬಾಗಿಲು ತೆರೆಯದೇ ಕಿಟಕಿಯಿಂದ ಮಾತಾಡಿಸಿ ಕಳುಹಿಸುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮನೆಯಲ್ಲಿ ಆಕ್ಸಿಜನ್‌ ಸಿಲಿಂಡರ್‌ ಕಂಡುಬಂದಿದೆ.