ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಆಗಲಿರುವ ಬಾಲರಾಮನ ಮೂರ್ತಿಯನ್ನು ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ್ದಾರೆ ಎನ್ನುವುದು ವಿಶೇಷವಾದರೆ ಮೂರ್ತಿಗೆ ಬಳಸಲಾದ ಶಿಲೆ ಸಹಾ ಮೈಸೂರಿನದ್ದೇ ಎನ್ನುವುದು ಮತ್ತೊಂದು ವಿಶೇಷ ಸಂಗತಿ. ರಾಮನಿಗೆ ಮೈಸೂರಿನ ಶಿಲೆ ಮತ್ತು ಶಿಲೆಯ ಸ್ಪರ್ಶ ಸಿಕ್ಕಿರುವುದು ಹೆಮ್ಮೆ. ಕೃಷ್ಣಶಿಲೆ ಮೂರ್ತಿ ಕೆತ್ತನೆಗೆ ಪ್ರಶಸ್ತವಾಗಿರುವ ಕಲ್ಲು.

ಮೈಸೂರು :
ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಜನವರಿ 22ರಂದು ಪ್ರಾಣ ಪ್ರತಿಷ್ಠೆ ಮಾಡಲಿರುವ ಬಾಲ ರಾಮನ ಮೂರ್ತಿಗೆ ಮೈಸೂರಿನ ಶಿಲೆ ಬಳಕೆಯಾಗುತ್ತಿದೆ.

ಮೈಸೂರು ತಾಲೂಕು ಹಾರೋಹಳ್ಳಿ ಗ್ರಾಮದ ರಾಮದಾಸ್ ಎಂಬುವರ ಜಮೀನಿನಲ್ಲಿದ್ದ ವಿಶೇಷ ಕಲ್ಲನ್ನು ಒಯ್ಯಲಾಗಿದೆ. ರಾಮಲಲ್ಲಾ ಮೂರ್ತಿ ಕೆತ್ತನೆಗೆ ಪ್ರಶಸ್ತವಾಗಿರುವ ಕೃಷ್ಣ ಶಿಲೆ ಇದು ಎಂದು ಗೊತ್ತಾಗಿದೆ.

ಗುಜ್ಜೆಗೌಡನಪುರದ ಶ್ರೀನಿವಾಸ ಎಂಬವರು ಈ ಜಮೀನು ಗುತ್ತಿಗೆ ಪಡೆದಿದ್ದರು. ಸುರೇಂದ್ರ ವಿಶ್ವಕರ್ಮ ಎಂಬವರು ಶ್ರೀನಿವಾಸ ಅವರನ್ನು ಸಂಪರ್ಕಿಸಿ ಮಾನಯ್ಯ ಬಡಿಗೇರ ಎಂಬುವರು ಕಲ್ಲು ಪರೀಕ್ಷೆ ಮಾಡಿದ್ದರು. ನಂತರ ರಾಮಮಂದಿರ ಟ್ರಸ್ಟ್ ಸದಸ್ಯರ ಸಮ್ಮುಖದಲ್ಲಿ ಕಲ್ಲನ್ನು ಮೂರ್ತಿಗೆ ಅಂತಿಮಗೊಳಿಸಲಾಗಿತ್ತು.

ರಾಮದಾಸರ ಜಮೀನಿನಲ್ಲಿ 10 ಅಡಿ ಆಳದಲ್ಲಿ ಶಿಲೆ ತೆಗೆಯಲಾಗಿದೆ. ರಾಮನ ಮೂರ್ತಿಗೆ ಸುಮಾರು 19 ಅಡಿ ತೂಕದ 9 ಅಡಿ 8 ಇಂಚು ಉದ್ದದ ಶಿಲೆ ತೆಗೆಯಲಾಗಿದೆ. ರಾಮನೊಂದಿಗೆ ಸೀತೆ, ಲಕ್ಷ್ಮಣ, ಭರತ, ಶತ್ರುಘ್ನರ ಮೂರ್ತಿಗೂ ಸಹ ಶಿಲೆ ಒಯ್ಯಲಾಗಿದೆ. ಕಲ್ಲನ್ನು ಕಳಿಸಿದ ವಿಷಯ ಪ್ರಚಾರ ಮಾಡಬಾರದು ಎಂಬ ಶರತ್ತಿನಂತೆ ಈ ಕೆಲಸ ಮಾಡಲಾಗಿದೆ.
ಕಲ್ಲು ತೆಗೆದ ನಂತರ ಮಣ್ಣು ಮುಚ್ಚಿ ಭೂಮಿಯನ್ನು ಸಮತಟ್ಟು ಮಾಡಲಾಗಿದೆ. ಕಲ್ಲಿನೊಂದಿಗೆ ಮಣ್ಣನ್ನು ಸಹಾ ತೆಗೆದುಕೊಂಡು ಹೋಗಲಾಗಿದ್ದು ಸುಮಾರು 40 ಟನ್ ತೂಕದ ಕಲ್ಲನ್ನು ಗ್ರಾಮಸ್ಥರು ಅತ್ಯಂತ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿ ಕಳಿಸಿದ್ದಾರೆ.