ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರೊಬ್ಬರ ಪುತ್ರಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಎನ್ನುವರ ಪುತ್ರಿಯನ್ನು ಇಂದು (ಏಪ್ರಿಲ್ 18) ಕಾಲೇಜ್ ನಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಹಾಡಹಗಲೆ ಹುಬ್ಬಳ್ಳಿ ಕಾಲೇಜ್ ನಲ್ಲಿರುವಾಗಲೇ ಹತ್ಯೆ ನಡೆದಿರುವುದು ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಸದ್ಯ ಮೃತದೇಹವನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪೋಷಕರ ಆಕ್ರಂದನ‌ ಮುಗಿಲು ಮುಟ್ಟಿದೆ.

ಹುಬ್ಬಳ್ಳಿಯ ವಿದ್ಯಾನಗರ ಠಾಣೆಯ ಪೊಲೀಸರು, ಕೊಲೆ ಆರೋಪಿ ಬೆಳಗಾವಿ ಜಿಲ್ಲೆ ಸವದತ್ತಿ ನಿವಾಸಿ ಫಯಾಜ್ ಎನ್ನುವಾತನನ್ನು ಬಂಧಿಸಿದ್ದಾರೆ.

ಕೊಲೆಯಾದ ವಿದ್ಯಾರ್ಥಿನಿ ಹುಬ್ಬಳ್ಳಿ ಕಾಲೇಜಿನಲ್ಲಿ ಎಂಸಿಎ ಓದುತ್ತಿದ್ದಳು. ಕೊಲೆ ಆರೋಪಿ ಫಯಾಜ್‌ ಸಹ ಅದೇ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದಾನೆ. ಹೀಗಾಗಿ ಪ್ರೀತಿ ಮಾಡಲು ನಿರಾಕರಿಸಿದ್ದಕ್ಕೆ ಅವಳನ್ನು ಕೊಲೆ ಮಾಡಿದ್ದಾನೆ. ಕಳೆದ ಕೆಲ ದಿನಗಳಿಂದ ಪ್ರೀತಿಸುವಂತೆ ಅವಳ ಬೆನ್ನುಬಿದ್ದಿದ್ದ. ಆದರೆ ಪ್ರೀತಿಗೆ ನಿರಾಕರಿಸಿದ್ದಳು. ಇದರಿಂದ ಕೋಪಗೊಂಡು ಫಯಾಜ್, ಅವಳ ಕುತ್ತಿಗೆಯ 2 ಕಡೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಶಾಸಕ ಪ್ರಸಾದ್ ಅಬ್ಬಯ್ಯ ಭೇಟಿ ನೀಡಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಕೊಲೆ ಮಾಡಿರುವ ಆರೋಪಿಯನ್ನು ಬಂಧನ ಮಾಡಲಾಗಿದೆ. ನಿರಂಜನ ಹಿರಮೇಠ ನಮ್ಮ ಪಕ್ಷದ ಪಾಲಿಕೆ ಸದಸ್ಯರು. ಬಹಳ ಒಳ್ಳೆಯ ಹುಡುಗಿ,ಯಾವಾಗಲೂ ಅಂಕಲ್ ಎಂದು ಕರೆಯುತ್ತಿದ್ದಳು. ಹುಬ್ಬಳ್ಳಿಯಲ್ಲಿ ಹೀಗಾಗಬಾರದಿತ್ತು ಎಂದರು.