ಬೆಳಗಾವಿ : ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಂತಕ ಫಯಾಜ್ ತಂದೆ ಬಾಬಾ ಸಾಹೇಬ್ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು,ಕರ್ನಾಟಕ ಜನತೆಯಲ್ಲಿ ನಾನು ಕ್ಷಮೆಯಾಚಿಸುತ್ತೇನೆ.

ಈ ಘಟನೆಯಿಂದ ಮುನವಳ್ಳಿ ಊರಿಗೆ ಕಪ್ಪು ಚುಕ್ಕೆ ಬಂದಿದೆ. ರಾಜ್ಯದ ಜನತೆ ಹಾಗೂ ಮುನವಳ್ಳಿ ಯುವಕರು ಶಾಂತಿ ಕಾಪಾಡುವಂತೆ ಕಣ್ಣೀರು ಹಾಕುತ್ತಲೇ ಮನವಿ ಮಾಡಿದ್ದಾರೆ.

ಕಾನೂನು ಯಾವ ಶಿಕ್ಷೆ
ಕೊಟ್ಟರೂ ಅದನ್ನು ನಾನು ಸ್ವಾಗತಿಸುತ್ತೇನೆ. ದಯವಿಟ್ಟು
ನೇಹಾ ಕುಟುಂಬದವರು, ರಾಜ್ಯದ ಜನ ಹಾಗೂ ಮುನವಳ್ಳಿ ಜನತೆ ನನ್ನನ್ನು ಕ್ಷಮಿಸಬೇಕು ಎಂದು ಕೈ ಮುಗಿದು ಅಂಗಲಾಚಿದ್ದಾರೆ.

ಚಾಕುವಿನಿಂದ 10 ಬಾರಿ ಇರಿದು ಕೊಂದ ಆರೋಪಿ ಫಯಾಜ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಜಸ್ಟೀಸ್ ಫಾರ್ ನೇಹಾ ಅನ್ನೋ ಟ್ರೆಂಡಿಂಗ್ ಆಗಿದ್ದು ಕೊಲೆಗಾರನ ಮೇಲೆ ನೆಟ್ಟಿಗರು ಕೆಂಡಕಾರುತ್ತಿದ್ದಾರೆ. ಅಲ್ಲದೇ ಅವನನ್ನು ನೇಣಿಗೆ ಹಾಕಬೇಕು. ಇಲ್ಲ ಎಂಟರ್ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ. ಇನ್ನು ಮಗನ ಈ ಪೈಶಾಚಿಕ ಕೃತ್ಯಕ್ಕೆ ತಂದೆ ಪ್ರತಿಕ್ರಿಯಿಸಿದ್ದಾರೆ.

ಘಟನೆ ಬಗ್ಗೆ ಆರೋಪಿ ಫಯಾಜ್‌ ತಂದೆ ಬಾಬಾ ಸಾಹೇಬ್‌ ಸುಬಾನಿ ಪ್ರತಿಕ್ರಿಯಿಸಿ, ಮಗನ ತಪ್ಪಿನಿಂದ ಊರಿಗೇ ಕೆಟ್ಟ ಹೆಸರು ಬಂದಿದೆ. ನನ್ನ ಮಗ ಫಯಾಜ್‌ಗೆ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ.

ನನ್ನ ಮಗ ಮಾಡಿದ ತಪ್ಪಿಗೆ ನಾನು ಮುನವಳ್ಳಿ ಹಾಗೂ ರಾಜ್ಯದ ಜನರ ಬಳಿ ಕ್ಷಮೆ ಕೇಳುತ್ತೇನೆ. ನಮ್ಮನ್ನು ಮುನವಳ್ಳಿ ಜನ ಬೆಳೆಸಿದ್ದಾರೆ. ಅವರ ಋಣ ತೀರಿಸಲು ಸಾಧ್ಯವಿಲ್ಲ. ಹೀಗಾಗಿ ನಮ್ಮೂರಿನ ಜನ ನನ್ನನ್ನು ಕ್ಷಮಿಸಬೇಕು. ದಯವಿಟ್ಟು ಯಾವುದೇ ಯುವಕರು, ನನ್ನ ಮಗನ ರೀತಿಯಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡಬಾರದು ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾರೆ.

ನಾನು ಯಾವತ್ತೂ ಯಾರಿಗೂ ಕೆಟ್ಟದ್ದು ಮಾಡಿಲ್ಲ, ಈಗ ನನ್ನ ಮಗ ದೇಶದ ಮುಂದೆ ತಲೆ ತಗ್ಗಿಸುವ ಕೆಲಸ ಮಾಡಿಬಿಟ್ಟಿದ್ದಾನೆ. ಹೀಗಾಗಿ ನನ್ನನ್ನು ಮುನವಳ್ಳಿ ಗ್ರಾಮದ ಜನರು ಕ್ಷಮಿಸಬೇಕು ಎಂದು ಕಣ್ಣೀರು ಹಾಕಿರುವ ಅವರು, ನಾನು ಸಾಯೋವರೆಗೆ ಮುನವಳ್ಳಿ ಜನರ ಸೇವೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಯಾರೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ಮಾಡುತ್ತಾರೋ ಅಂತಹವರಿಗೆ ಮುಂದಿನ ದಿನಗಳಲ್ಲಿ ಯಾರೂ ಅಂಥ ಕೃತ್ಯ ಮಾಡಬಾರದು, ಆ ರೀತಿಯ ಶಿಕ್ಷೆ ಆಗಬೇಕು. ಇಂತಹ ಘಟನೆಗಳಿಂದ ನಾಳಿನ ದಿನ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಲು ಜನ ಭಯಪಡುತ್ತಾರೆ. ಹೀಗಾಗಿ ನನ್ನ ಜನ್ಮಭೂಮಿ ಮುನವಳ್ಳಿ, ಅವರಿಗಾಗಿ ನಾನು ಬದುಕುತ್ತೇನೆ ಎಂದು ಹೇಳಿದ್ದಾರೆ.

ವರ್ಷದ ಹಿಂದೆ ನೇಹಾ ಅವರ ತಂದೆ ನನಗೂ ಎರಡು ಬಾರಿ ಫೋನ್‌ ಮಾಡಿದ್ದರು. ನನ್ನ ಮಗಳಿಗೆ ನಿಮ್ಮ ಮಗ ಕಿರುಕುಳ ನೀಡುತ್ತಿದ್ದಾನೆ ಎಂದು ಹೇಳಿದ್ದರು. ಅವರ ತುಂಬಾ ಒಳ್ಳೆಯವರು. ನಾವಿಬ್ಬರೂ ಪ್ರೀತಿ ಮಾಡುತ್ತಿದ್ದೇವೆ ಎಂದು ಮಗ ಹೇಳಿದ್ದ. ಅವನು ಜಗಳ ಮಾಡಿದ್ದ. ಈಗ ಅವನು ನನ್ನ ಬಳಿ ಮಾತನಾಡಲ್ಲ. ನಮ್ಮ ದಾಂಪತ್ಯ ಜೀವನ ಸರಿಯಿಲ್ಲದ ಕಾರಣ ಅವರ ತಾಯಿ ಜತೆ ಅವನು ಪ್ರತ್ಯೇಕವಾಗಿ ವಾಸವಾಗಿದ್ದ ಎಂದು ಹೇಳಿದರು.

ನಾನು ಸೈನಿಕನಾಗಿ ದೇಶ ಸೇವೆ ಸಲ್ಲಿಸಬೇಕು ಅಂದುಕೊಂಡಿದ್ದೆ. ಆದರೆ, ನಮ್ಮ ತಾಯಿ ಬೇಡ ಅಂದಿದ್ದರು. ಹೀಗಾಗಿ ನನ್ನ ಮಗನನ್ನು ಸೇನೆಗೆ ಸೇರಿಸಬೇಕು ಅಂದುಕೊಂಡಿದ್ದೆ. ಆದರೆ ಅವನು ಈ ರೀತಿಯ ಕೆಲಸ ಮಾಡಿದ್ದಾನೆ ಎಂದು ತಿಳಿಸಿದರು.