ಚನ್ನಮ್ಮನ ಕಿತ್ತೂರು: ಕಿತ್ತೂರು– ಬೀಡಿ ರಸ್ತೆಯ ಫಾರೆಸ್ಟ್ ನಾಕಾ ಬಳಿ ಬುಧವಾರದಂದು ಕಾಲೇಜು ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚನ್ನಮ್ಮನ ಕಿತ್ತೂರಿನ ಸರ್ಕಾರಿ ಪದವಿ ಕಾಲೇಜಿನಲ್ಲಿ 3 ನೇ ಸೆಮಿಸ್ಟರ್‌ ಓದುತ್ತಿದ್ದ ಕಾವೇರಿ ಬಸಪ್ಪ ಕಾಜಗಾರ (20) ಮೃತ ವಿದ್ಯಾರ್ಥಿನಿ. ದೇಗಾಂವ ಗ್ರಾಮದ ಅನಿಲ ಚಿವುಟಗುಂಡಿ ಅಪಘಾತಕ್ಕೆ ಕಾರಣನಾದ ವಾಹನ ಚಾಲಕ.

ಎಂದಿನಂತೆ ಬುಧವಾರ ಕಾಲೇಜು ಮುಗಿಸಿಕೊಂಡು ವಿದ್ಯಾರ್ಥಿನಿ ಮನೆ ಕಡೆಗೆ ಹೊರಟಿದ್ದರು. ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದಾಗ ಏಕಾಏಕಿ ಬಂದ ಟಂಟಂ ವಾಹನ ವಿದ್ಯಾರ್ಥಿನಿ ಮೇಲೆಯೇ ಹರಿಯಿತು. ತೀವ್ರ ಗಾಯಗೊಂಡ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾಗಿ ವೈದ್ಯರು ಖಚಿತಪಡಿಸಿದರು.

ಸ್ಥಳಕ್ಕೆ ಧಾವಿಸಿದ ಪೊಲೀಸರು ಜನರನ್ನು ಚದುರಿಸಿ, ಆರೋಪಿಯನ್ನು ವಶಕ್ಕೆ ಪಡೆದರು.