ಕಾರವಾರ: ಕಾಂಗ್ರೆಸ್ ಸರ್ಕಾರದ ವಿರುದ್ಧವಾಗಿ ವಾಗ್ದಾಳಿ
ಮಾಡುವ ಸಂದರ್ಭದಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ, ಸಿಎಂ ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಂತ್ ಕುಮಾರ್ ಹೆಗಡೆ ವಿರುದ್ಧ ಸ್ವಯಂಪ್ರೇರಿತ ಪ್ರಕರಣ (ಸುಮೊಟೋ ಕೇಸ್) ದಾಖಲಿಸಲಾಗಿದೆ.

ಪಾಳಾದಲ್ಲಿ ಫೆ.23ರಂದು ಕಾರ್ಯಕರ್ತರ ಸಭೆಯಲ್ಲಿ ಭಾಷಣ ಮಾಡುವ ವೇಳೆ, ‘ನಮ್ಮ ತೆರಿಗೆ ನಮ್ಮ ಹಕ್ಕು’ ಹೋರಾಟಕ್ಕೆ ತಿರುಗೇಟು ನೀಡುವ ಭರದಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ, ದೇಶದಲ್ಲಿ 99.9% ಹಿಂದೂಗಳು ತೆರಿಗೆ ಕಟ್ಟುತ್ತಾರೆ. ಮುಸ್ಲಿಮರ ಮಸೀದಿಗೆ ಯಾಕೆ ಅನುದಾನ ಕೊಟ್ರಿ? ಸಿದ್ರಾಮುಲ್ಲಾ ಖಾನ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ. ರಾಜ್ಯದಲ್ಲಿ ಸಿದ್ರಮುಲ್ಲಾ ಖಾನ್ ಸರ್ಕಾರ ಇದೆ ಎಂದು ವಾಗ್ದಾಳಿ ನಡೆಸಿದ್ದರು.

ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆದಿದ್ದರು. ಅಲ್ಲದೆ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಖಲಿಸ್ತಾನಿಗಳೆಂದು ಹೇಳಿದ್ದರು. ಧಾರ್ಮಿಕ, ಸಾಮಾಜಿಕವಾಗಿ ಅಪಮಾನಕರ ಮಾತುಗಳನ್ನಾಡಿರುವ ಹಿನ್ನೆಲೆಯಲ್ಲಿ ಸಂಸದರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೆ ಕುಮಟಾದಲ್ಲಿ ನಡೆದಿದ್ದ ಸಭೆಯಲ್ಲಿಯೂ ಅನಂತಕುಮಾರ ಪ್ರಚೋದನಕಾರಿ ಮಾತನಾಡಿದ್ದಕ್ಕೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.