ಕೋಲ್ಕತ್ತಾ: ಹವಾಮಾನ ವರದಿ ನೀಡುತ್ತಿರುವಾಗಲೇ ಡಿಡಿ ದೂರದರ್ಶನದ ವಾರ್ತಾ ವಾಚಕಿಯೊಬ್ಬರು ಲೈವ್‌ನಲ್ಲೇ ಕುಸಿದು ಬಿದ್ದಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಸೇರಿದ ಬೆಂಗಾಲಿ ದೂರದರ್ಶನದ ಲೈವ್‌ನಲ್ಲಿ ಈ ಘಟನೆ ನಡೆದಿದೆ. ಬಿರು ಬೇಸಿಗೆಯಿಂದಾಗಿ ದೇಶದೆಲ್ಲೆಡೆ ಬಿಸಿಲಿನ ತಾಪ ತಡೆಯಲಾಗದೇ ಜನ ತರಗುಟ್ಟುತ್ತಿದ್ದಾರೆ ಅದರಂತೆ ಪಶ್ಚಿಮ ಬಂಗಾಳದಲ್ಲಿಯೂ ಕೂಡ ಬಿಸಿಲಿನ ತಾಪಮಾನ ಮಿತಿ ಮೀರಿದ್ದು, ಬಿಸಿ ಹವೆಯಿಂದಾಗಿ ಜನ ತತ್ತರಿಸಿದ್ದಾರೆ. ಈ ಬಿಸಿಲಿನ ಝಳ ಈಗ ವಾರ್ತಾ ವಾಚಕಿಯೊಬ್ಬರಿಗೂ ತಟ್ಟಿದೆ.

ದೂರದರ್ಶನ ಚಾನೆಲ್‌ನಲ್ಲಿ ಪ್ರತಿದಿನದಂತೆ ರಾಜ್ಯದ ಹವಾಮಾನದ ಬಗ್ಗೆ ಅವರು ವರದಿ ಮಾಡುತ್ತಿದ್ದಾಗ ಲೈವ್‌ನಲ್ಲೇ ವಾರ್ತಾವಾಚಕಿ ಪ್ರಜ್ಞಾಶೂನ್ಯರಾಗಿದ್ದಾರೆ. ಹೀಗೆ ಪ್ರಜ್ಞೆ ತಪ್ಪಿದ ವಾರ್ತಾ ವಾಚಕಿಯನ್ನು ಲೋಪಮುದ್ರಾ ಸಿನ್ಹಾ ಎಂದು ಗುರುತಿಸಲಾಗಿದೆ. ಕೋಲ್ಕತ್ತಾದ ದೂರದರ್ಶನ ಬ್ರಾಂಚ್‌ನಲ್ಲಿ ಸುದ್ದಿ ಪ್ರಸ್ತುತಪಡಿಸುತ್ತಿದ್ದಾಗಲೇ ಈ ಘಟನೆ ನಡೆದಿದೆ. ಪ್ರಸ್ತುತ ಲೋಪಮುದ್ರಾ ಅವರು ಈ ಘಟನೆಯಿಂದ ಚೇತರಿಸಿಕೊಂಡು ಗುಣಮುಖರಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಡೆದ ಘಟನೆ ಬಗ್ಗೆ, ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಅವರು ರಕ್ತದೊತ್ತಡ ತೀವ್ರವಾಗಿ ಕುಸಿದಿದ್ದರಿಂದ ತನಗೆ ಲೈವ್‌ನಲ್ಲೇ ಪ್ರಜ್ಞೆ ತಪ್ಪಿತ್ತು ಎಂದು ಹೇಳಿಕೊಂಡಿದ್ದಾರೆ.

ನ್ಯೂಸ್ ಓದಲು ಆರಂಭಿಸುವುದಕ್ಕೆ ಮೊದಲೇ ನನಗೆ ಸ್ವಲ್ಪ ನಿತ್ರಾಣವಾದಂತಾಗಿದ್ದು, ಆದರೆ ಅದನ್ನು ನಾನು ಗಂಭೀರವಾಗಿ ಪರಿಗಣಿಸಿರಲಿಲ್ಲ, ನೀರು ಕುಡಿದರೆ ಸರಿ ಹೋಗುತ್ತದೆ ಎಂದು ಭಾವಿಸಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ನೀರು ಕುಡಿಯಲು ಸಮಯವಿಲ್ಲದ್ದರಿಂದ ಹಾಗೆಯೇ ಸ್ಟುಡಿಯೋಗೆ ಹೋಗಿ ನ್ಯೂಸ್ ಓದಲು ಶುರು ಮಾಡಿದ್ದಾರೆ. ಆದರೆ ವಾರ್ತೆ ಮುಗಿದು ಹವಾಮಾನ ವರದಿ ಓದುತ್ತಿರುವ ವೇಳೆ ಲೈವ್‌ನಲ್ಲೇ ಇದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ.

ಹವಾಮಾನ ವರದಿಯಲ್ಲಿ ರಾಜ್ಯದ ಎಲ್ಲೆಲ್ಲಿ ಬಿಸಿ ಗಾಳಿ ಇದೆ ಎಂಬ ಬಗ್ಗೆ ವರದಿ ನೀಡುತ್ತಿರುವಾಗಲೇ ತನಗೆ ಕಣ್ಣುಗಳು ಮಂಜು ಮಂಜಾಯ್ತು ಎಂದು ಅವರು ಹೇಳಿದ್ದಾರೆ. ಇನ್ನು ಅವರು ಕುಸಿದು ಬೀಳುತ್ತಿದ್ದಂತೆ ಅಲ್ಲಿದ್ದವರು ಅವರ ಸಹಾಯಕ್ಕೆ ಧಾವಿಸಿ ಬಂದು ಮುಖಕ್ಕೆ ನೀರು ಚಿಮುಕಿಸಿ ಎಚ್ಚರ ಗೊಳಿಸಿದ್ದಾರೆ. ಪ್ರಸ್ತುತ ತಾನು ಆರೋಗ್ಯವಾಗಿರುವುದಾಗಿ ಅವರು ಫೇಸ್‌ಬುಕ್ ಮೂಲಕ ಹೇಳಿಕೊಂಡಿದ್ದಾರೆ. ಅವರ ಅನೇಕ ಸ್ನೇಹಿತರು, ಆತ್ಮೀಯರು ಶೀಘ್ರವಾಗಿ ಗುಣಮುಖರಾಗುವಂತೆ ಹಾರೈಸಿದ್ದಾರೆ.

ಪ್ರಸ್ತುತ ಪಶ್ಚಿಮ ಬಂಗಾಳದ ದಕ್ಷಿಣ ಭಾಗದಲ್ಲಿ 40 ಡಿಗ್ರಿಗಿಂತ ಹೆಚ್ಚು ತಾಪಮಾನವಿದ್ದು, ಇದು ಸಾಮಾನ್ಯಕ್ಕಿಂತ 4ರಿಂದ 5 ಪಟ್ಟು ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. ದಕ್ಷಿಣ ಪರಗಣ, ಉತ್ತರ ಪರಗಣ, ಪುರ್ಬಾ, ಪಶ್ಚಿಮಬರ್ಧಮಾನ್, ಪಶ್ಚಿಮ ಮೇದಿನಿಪುರ, ಪುರುಲಿಯಾ, ಝಾರ್ಗ್ರಾಮ್, ಬಿರ್ಬೂಮ್, ಮುರ್ಷಿದಾಬಾದ್, ಬಂಕುರ ಜಿಲ್ಲೆಗಳಲ್ಲಿ ಬಿಸಿಗಾಳಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚರಿಕೆ ನೀಡಿದೆ.