ನವದೆಹಲಿ: ವೈಸ್ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಅವರನ್ನು ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.

ಪ್ರಸ್ತುತ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್ ಅವರು ಏಪ್ರಿಲ್ 30ರಂದು ಸೇವೆಯಿಂದ ನಿವೃತ್ತರಾಗಲಿದ್ದು, ದಿನೇಶ್ ತ್ರಿಪಾಠಿ ಅಂದೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

1964ರ ಮೇ 15 ರಂದು ಜನಿಸಿದ ತ್ರಿಪಾಠಿ ಅವರು, ಖಡಕ್‌ವಾಸ್ಲಾದ ಸೈನಿಕ್ ಸ್ಕೂಲ್ ರೇವಾ ಮತ್ತು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿ. 1985ರಲ್ಲಿ ಅವರನ್ನು ಭಾರತೀಯ ನೌಕಾಪಡೆಯ ಕಾರ್ಯನಿರ್ವಾಹಕ ಶಾಖೆಗೆ ನಿಯೋಜಿಸಲಾಯಿತು.

ಸಂವಹನ ಮತ್ತು ಎಲೆಕ್ಟ್ರಾನಿಕ್ ಯುದ್ಧ ತಜ್ಞರಾದ ಇವರು ಸುಮಾರು 30 ವರ್ಷಗಳ ಕಾಲ ಸುದೀರ್ಘ ಸೇವಾ ಅನುಭವ ಹೊಂದಿದ್ದಾರೆ. ಜತೆಗೆ ಅತಿ ವಿಶಿಷ್ಟ ಸೇವಾ ಪದಕ (AVSM) ಮತ್ತು ನವೋ ಸೇನಾ ಪದಕ (NM)ಗಳನ್ನು ಪಡೆದಿದ್ದಾರೆ.