ಶ್ರೀರಂಗಪಟ್ಟಣ (ಮಂಡ್ಯ): ಬೆಟ್ಟಹಳ್ಳಿ ಗ್ರಾಮದಲ್ಲಿ ಅವಳಿ ಮಕ್ಕಳು ಐಸ್‌ಕ್ರೀಂ ತಿಂದ ಬಳಿಕ ಮೃತಪಟ್ಟಿದ್ದಾರೆ.

ಗ್ರಾಮದ ಪ್ರಸನ್ನ ಮತ್ತು ಪೂಜಾ ದಂಪತಿಯ ಒಂದೂವರೆ ವರ್ಷದ ತ್ರಿಶೂಲ್‌ ಮತ್ತು ತ್ರಿಶಾ ಮೃತರಾದ ಮಕ್ಕಳು. ಅವರೊಂದಿಗೆ ಐಸ್ ಕ್ರೀಂ ತಿಂದಿದ್ದ ಪೂಜಾ ಕೂಡ ಅಸ್ವಸ್ಥಗೊಂಡಿದ್ದು, ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವಾಹನದಲ್ಲಿ ಬೆಟ್ಟಹಳ್ಳಿಗೆ ತಂದಿದ್ದ ಐಸ್‌ ಕ್ರೀಂ ಖರೀದಿಸಿ ತಿಂದ ಕೆಲ ಹೊತ್ತಿನ ಬಳಿಕ ಮಕ್ಕಳು ಅಸ್ವಸ್ಥಗೊಂಡಿವೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತರಾದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇದೇ ವಾಹನದಲ್ಲಿ ಗ್ರಾಮದ ಇನ್ನೂ ಹಲವರು ಐಸ್‌ಕ್ರೀಂ ಖರೀದಿಸಿ ತಿಂದಿದ್ದರು. ಬೇರೆಯವರಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಕ್ಕಳ ಸಾವು ಪ್ರಕರಣ ಅನುಮಾನಾಸ್ಪವಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಅರಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.