ಎಲ್ಲಾ ಶಾಲೆಗಳಲ್ಲಿ (ಸರ್ಕಾರಿ, ಅನುದಾನಿತ, ಅನುದಾನ ರಹಿತ ಮತ್ತು ಖಾಸಗಿ) ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಡುವುದನ್ನು ಕಡ್ಡಾಯಗೊಳಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪಾಧ್ರಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳು ಅಧಿಕೃತ ಕಾರ್ಯಕ್ರಮಗಳನ್ನು ಆಯೋಜಿಸುವ ಪ್ರಾರಂಭದಲ್ಲಿ ನಾಡಗೀತೆಯನ್ನು ಹಾಡಬೇಕೆಂದು ಸರ್ಕಾರ ತಿದ್ದುಪಡಿ ಆದೇಶದಲ್ಲಿ ತಿಳಿಸಿದೆ.ಇದಕ್ಕೂ ಮುನ್ನ 2024ರ ಜನವರಿ 7ರಂದು ಹೊರಡಿಸಿದ್ದ ಆದೇಶದಲ್ಲಿ ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪಾಧ್ರಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಆಯೋಜಿಸುವ ಪ್ರಾರಂಭದಲ್ಲಿ ಹಾಡಬೇಕು ಎಂದು ತಿಳಿಸಲಾಗಿತ್ತು. ಆದರೆ ಯಾವ ಶಾಲೆಗಳೆಂದು ನಿರ್ದಿಷ್ಟವಾಗಿ ಹೇಳಿರಲಿಲ್ಲ.

ಬೆಂಗಳೂರು: ವಸತಿ ಶಾಲೆಗಳ ಪ್ರವೇಶ ದ್ವಾರದ ಮೇಲೆ ಕುವೆಂಪು ಅವರ ಕವಿತೆಯ ಬರಹವನ್ನು ಬದಲಾವಣೆ ಮಾಡಿ ಚರ್ಚೆಗೆ ಗ್ರಾಸವಾಗಿದ್ದ ರಾಜ್ಯ ಸರ್ಕಾರ ಅದಾದ ಎರಡು ದಿನಗಳಲ್ಲಿ ಮತ್ತೊಂದು ಯಡವಟ್ಟು ನಿರ್ಧಾರ ಮಾಡಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಅದರಿಂದ ಯೂ ಟರ್ನ್‌ ಹೊಡೆದಿದೆ ಹಾಗೂ ಈಗ ತಿದ್ದುಪಡಿ ಆದೇಶ ಹೊರಡಿಸಿದೆ.

ಖಾಸಗಿ ಶಾಲೆಗಳಲ್ಲಿ ಇನ್ನು ಮುಂದೇ ನಾಡಗೀತೆ ಕಡ್ಡಾಯವಲ್ಲ ಎಂದು ಸರ್ಕಾರ ಹೊಸ ಆದೇಶ ಹೊರಡಿಸಿತ್ತು. ಆದರೆ ಸರ್ಕಾರದ ಆದೇಶಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ ವಿವಾದಕ್ಕೆ ತೆರೆ ಎಳೆದು ತೇಪೆ ಹಚ್ಚುವ ಕೆಲಸ ಮಾಡಿದೆ.
ಏನಿದು ವಿವಾದ…
ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳಲ್ಲಿ ಮಾತ್ರ ನಾಡಗೀತೆ ಕಡ್ಡಾಯವಾಗಿ ಹಾಡಬೇಕು ಎಂದು ಹೇಳಿದ್ದ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸುತ್ತೋಲೆ ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ನಾಡಗೀತೆ ಹಾಡುವುದಕ್ಕೆ ವಿನಾಯ್ತಿ ನೀಡಿತ್ತು. ಆದೇಶ ಪ್ರತಿ ಬಹಿರಂಗವಾಗುತ್ತಿದ್ದಂತೆ ಈ ಕುರಿತಂತೆ ಮಾಧ್ಯಮಗಳು ವರದಿ ಪ್ರಸಾರ ಮಾಡಿದ ನಂತರ ಸಾರ್ವಜನಿಕರು, ವಿಪಕ್ಷಗಳ ನಾಯಕರು ಸರ್ಕಾರ ಈ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಬೌದ್ಧಿಕ ವಲಯದಲ್ಲಿ ಇದಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಅವರೆಲ್ಲರೂ ಸರ್ಕಾರ ಈ ಕೂಡಲೇ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದರು. ನಂತರ ಎಚ್ಚೆತ್ತ ಸರ್ಕಾರ ಆದೇಶದ ಕುರಿತು ಸ್ಪಷ್ಟನೆ ನೀಡಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಿ ಸಣ್ಣ ತಪ್ಪಿನಿಂದ ಹೀಗಾಗಿದೆ. ಎಲ್ಲ ಶಾಲೆಗಳಿಗೂ ನಾಡಗೀತೆ ಕಡ್ಡಾಯವಾಗಿದೆ. ತಪ್ಪನ್ನು ಸರಿಪಡಿಸಿ ಮತ್ತೊಂದು ಆದೇಶ ಹೊರಡಿಸುತ್ತೇವೆ ಎಂದು ವಿವಾದಕ್ಕೆ ತೇಪೆ ಹಚ್ಚಿದರು.

ಈ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಒಂದು ಸಣ್ಣ ಪ್ರಿಂಟ್ ಸಮಸ್ಯೆ ಆಗಿದೆ. ಆದೇಶ ಮಾಡುವಾಗ ಸರ್ಕಾರಿ ಶಾಲೆ ಅನುದಾನಿತ‌ ಶಾಲೆ ಎಂದು ಆಗಿದೆ. ಅದು ಎಲ್ಲಾ ಶಾಲೆಗಳು ಎಂದು ಆಗಬೇಕಿತ್ತು. ಅದನ್ನು ತಕ್ಷಣವೇ ಸರಿಪಡಿಸಿ ಮತ್ತೊಂದು ಆದೇಶ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು. ನಮ್ಮ ಸರ್ಕಾರ ಕನ್ನಡ ಬಗ್ಗೆ ಕಾಳಜಿಯಿದೆ, ನಾವು ಬಹಳ ಸ್ಪಷ್ಟವಾಗಿ ಇದ್ದೇವೆ. ಮಾಧ್ಯಮದವರಿಗೆ ಆದ ತಪ್ಪಿನ ಬಗ್ಗೆ ಬಗ್ಗೆ ತಿಳಿಸಬೇಕು ಎಂದು ಬಂದಿದ್ದೇನೆ ಎಂದು ಸಮಜಾಯಿಷಿ ನೀಡಿದರು.
ಎಲ್ಲಾ ಶಾಲೆಗಳು ಬದಲಾಗಿ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ನಾಡಗೀತೆ ಹಾಡು ಕಡ್ಡಾಯ ಎಂಬ ಆದೇಶದಿಂದ ಗೊಂದಲ ಶುರುವಾಗಿತ್ತು. ಇದರ ಬೆನ್ನಲ್ಲೇ ಸಚಿವರು ಸ್ಪಷ್ಟನೆ ನೀಡುತ್ತಿದ್ದಂತೆ ಹಲವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಿದ್ದುಪಡಿ ಆದೇಶದಲ್ಲೇನಿದೆ?
ಸಚಿವರ ಸ್ಪಷ್ಟನೆ ಬೆನ್ನಲ್ಲೇ ಇಲಾಖೆ ತಿದ್ದುಪಡಿ ಆದೇಶವನ್ನು ಬಿಡುಗಡೆ ಮಾಡಿದ್ದು, ಎಲ್ಲಾ ಶಾಲೆಗಳಲ್ಲಿ (ಸರ್ಕಾರಿ, ಅನುದಾನಿತ, ಅನುದಾನ ರಹಿತ ಮತ್ತು ಖಾಸಗಿ) ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳು ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು ಎಂದು ತಿದ್ದಿ ಓದಿಕೊಳ್ಳತಕ್ಕದ್ದು ಎಂಬುದಾಗಿ ತಿದ್ದುಪಡಿ ಆದೇಶದಲ್ಲಿ ಸರ್ಕಾರ ಹೇಳಿದೆ.