ಬೆಳಗಾವಿ : ಬುಧವಾರದಂದು ಬೆಳಗಾವಿಯ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯ (B.Ed college ) ದಲ್ಲಿ ಅಂತರಾಷ್ಟ್ರೀಯ ಮಾತೃಭಾಷೆ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಿಕ್ಷಣ ಮಹಾವಿದ್ಯಾಲಯದ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಸಿದ್ದಣ್ಣ ವಿ.ವಾಲಿಶೆಟ್ಟಿ ಅವರು, ಭಾಷೆ ಬೆಳೆದು ಬಂದ ಬಗೆಯನ್ನು ವಿವರಿಸುತ್ತಾ ಅಳಿವಿನಂಚಿನಲ್ಲಿರುವ ವಿವಿಧ ಜನಾಂಗದ ಮಾತೃಭಾಷೆಯನ್ನು ಉಳಿಸಿ ಅವರ ಸಂಸ್ಕೃತಿ, ಪರಂಪರೆ ಯನ್ನು ಬೆಳೆಸಬೇಕಾಗಿದೆ. ಮಾತೃಭಾಷೆ ಮನದ, ಮನೆಯ, ಪರಿಸರದ ಭಾಷೆಯಾಗಿದ್ದು ಜನರ ಮೂಲ ಸಂಸ್ಕೃತಿ, ಜ್ಞಾನ, ತಿಳಿವಳಿಕೆಯ ಕನ್ನಡಿಯಾಗಿದೆ. ಮನಶಾಸ್ತ್ರಜ್ಞರು ಮಗುವಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಒದಗಿಸಿದಾಗ ಮಾತ್ರ ಕಲಿಕೆ ಅಚ್ಚಳಿಯದೇ ಉಳಿಯುವುದು ಎಂದು ಹೇಳಿರುವುದನ್ನು ನೆನಪಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನಿರ್ಮಲಾ ಬಟ್ಟಲ , ಭಾಷೆ ಮನಸ್ಸಿನ ಅಂತರಾಳದಿಂದ ಸಂವಹನದ ಮಾಧ್ಯಮವಾಗಿ ಹೊರ ಬರುವ ಭಾವ ಲಹರಿ ಆಗಿದೆ. ಸುತ್ತಲಿನ ಪರಿಸರದ ಪ್ರಭಾವದಿಂದ ಭಾಷೆಯೂ ಹಂತ ಹಂತವಾಗಿ ಬೆಳೆದು ಬಂದಿದೆ. ಪ್ರಾದೇಶಿಕ ಭಿನ್ನತೆಗೆ ಅನುಗುಣವಾಗಿ ಭಾಷೆ ವಿಭಿನ್ನ ಸ್ವರೂಪವನ್ನು ಹೊಂದಿ, ಸಂಸ್ಕೃತಿಯ ಹೂರಣ ಹಾಗೂ ತೋರಣವಾಗಿದೆ. ಭಾಷೆಯ ಬಗೆಗೆ ಇರುವ ಸಂಕುಚಿತ ಮನೋಭಾವ ಮಾತೃ ಭಾಷೆಯ ಬೆಳವಣಿಗೆಗೆ ಅಡ್ಡಿಯಾಗಿದೆ. ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಇಂದು ನಾವು ನಮ್ಮಮಾತೃ ಭಾಷೆಯ ಪ್ರಾಮುಖ್ಯತೆಯನ್ನು ಮನಗಾಣಲು ಸಾಧ್ಯವಾಗುತ್ತಿಲ್ಲ. ಸೊಬಗನ್ನು ಆಸ್ಟಾದಿಸಲು ಸಾಧ್ಯವಾಗುತ್ತಿಲ್ಲ ಎಂದರು.

ಬಹುಭಾಷಾ ಶಿಕ್ಷಣದ ನೀತಿಯನ್ನು ಅಳವಡಿಸುವ ಮೂಲಕ ಮಗುವಿಗೆ ಬಹುಭಾಷೆಯನ್ನು ಕಲಿಸಬೇಕು. 5 ನೇ ವರ್ಷದ ಒಳಗಿನ ಮಗು ತನ್ನ ಮಾತೃಭಾಷೆಯೊಂದಿಗೆ ಕನಿಷ್ಠ 3 ಅಥವಾ 4 ಭಾಷೆಗಳನ್ನು ಕಲಿಯುವ ಸಾಮರ್ಥ್ಯ ಹೊಂದಿರುತ್ತದೆ. ಅದಕ್ಕೆ ಪೂರಕವಾದ ಕಲಿಕಾ ವಾತಾವರಣ ನಿರ್ಮಾಣ ಮಾಡಬೇಕು.
ಪರಭಾಷೆ ಕಲಿಯುವುದರ ಜೊತೆಗೆ ಮಾತೃಭಾಷೆಯನ್ನು ಪ್ರಾಯೋಗಿಕವಾಗಿ ಹೆಚ್ಚೆಚ್ಚು ಬಳಸಿ, ಉಳಿಸಬೇಕು ಎಂದು ತಿಳಿಸಿದರು.

ಹಿಂದಿ ಭಾಷಾ ಪ್ರಾಧ್ಯಾಪಕ ಪ್ರೊ. ಮಂಜುನಾಥ ಕಲಾಲ ಸ್ವಾಗತಿಸಿದರು ಡಾ. ಗೀತಾ ದಯಣ್ಣವರ ವಂದಿಸಿದರು. ಕನ್ನಡ ಸಂಘದ ಖಜಾಂಚಿ ಹಾಗೂ ಕಾರ್ಯಕ್ರಮದ ಆಯೋಜಕರು, ಕನ್ನಡ ಭಾಷಾ ಪ್ರಾಧ್ಯಾಪಕಿ ಪ್ರೊ. ರೂಪಾ ಅಕ್ಕಿ ನಿರೂಪಿಸಿದರು. ಎಲ್ಲ ಸಹಾಯಕ ಪ್ರಾಧ್ಯಾಪಕರು ಹಾಗೂ ಪ್ರಥಮ , ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.