ಹೈದರಾಬಾದ್‌: ವಿವಾಹವಾಗುವ ಬಯಕೆಯಿಂದ ಮಹಿಳಾ ಉದ್ಯಮಿಯೊಬ್ಬರು ಮ್ಯೂಸಿಕ್‌ ಚಾನಲ್‌ ಒಂದರ ನಿರೂಪಕನನ್ನು ಅಪಹರಿಸಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಮಹಿಳೆಗೆ ನೆರವಾದ ಇತರ ನಾಲ್ವರನ್ನು ಸಹಾ ಪೊಲೀಸರು ಬಂಧಿಸಿದ್ದಾರೆ.

ಈ ಮಹಿಳೆ ಟಿವಿ ನಿರೂಪಕನನ್ನು ಹಿಂಬಾಲಿಸಲು ಮತ್ತು ಚಲನವಲನಗಳನ್ನು ಮೇಲ್ವಿಚಾರಣೆ ಮಾಡಲು ಆತನ ಕಾರಿನಲ್ಲಿ ಟ್ರ್ಯಾಕಿಂಗ್ ಉಪಕರಣ ಅಳವಡಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಡಿಜಿಟಲ್ ಮಾರ್ಕೆಟಿಂಗ್ ವ್ಯವಹಾರವನ್ನು ನಡೆಸುತ್ತಿರುವ 31 ವರ್ಷದ ಮಹಿಳೆ ಟಿವಿ ನಿರೂಪಕನ ಫೋಟೊಗಳನ್ನು ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ನೋಡಿದ್ದಳು. ಆದರೆ ಅದು ನಿರೂಪಕನ ಪೊಫೈಲ್‌ ಆಗಿರಲಿಲ್ಲ. ಆ ಖಾತೆದಾರ ತನ್ನ ಸ್ವಂತ ಫೋಟೋದ ಬದಲು ಟಿವಿ ನಿರೂಪಕನ ಚಿತ್ರವನ್ನು ಪ್ರೊಫೈಲ್ ಫೋಟೊವನ್ನಾಗಿ ಬಳಸುತ್ತಿರುವ ವಿಚಾರ ಆಕೆಗೆ ಬಳಿಕ ತಿಳಿದು ಬಂದಿತ್ತು ಎಂದು ಪೊಲೀಸರು ಹೇಳಿದ್ದಾರೆ.

ನಂತರ ಆಕೆ ನಿರೂಪಕನ ಫೋನ್ ನಂಬರ್‌ ಹುಡುಕಿ ತೆಗೆದಿದ್ದಳು. ನಿರೂಪಕನಿಗೆ ಮೆಸೇಜ್‌ ಮಾಡಿ, ತಮ್ಮ ಫೋಟೊವನ್ನು ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಮತ್ತೊಬ್ಬರು ಬಳಸುತ್ತಿದ್ದಾರೆ ಎಂದು ತಿಳಿಸಿದ್ದಳು. ಅದರಂತೆ ನಿರೂಪಕ ತನ್ನ ಫೋಟೊವನ್ನು ದುರ್ಬಳಕೆ ಮಾಡುತ್ತಿರುವ ಬಗ್ಗೆ ಸೈಬರ್‌ ಕ್ರೈಮ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದ.

ಹಲವು ದಿನಗಳವರೆಗೆ ಆ ಮಹಿಳೆ ನಿರೂಪಕನಿಗೆ ಮೆಸೇಜ್ ಕಳುಹಿಸುತ್ತಿದ್ದಳು. ಬೇಸತ್ತ ಆತ ಆಕೆಯ ನಂಬರ್‌ ಅನ್ನು ಬ್ಲಾಕ್‌ ಮಾಡಿದ್ದ. ಇದರಿಂದ ಹತಾಶಳಾದ ಮಹಿಳೆ ನಿರೂಪಕನನ್ನು ಮದುವೆಯಾಗಲು ಅಪಹರಣದ ಸಂಚು ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ನಿರೂಪಕನ ಅಪಹರಣಕ್ಕೆ ನಾಲ್ಕು ಜನರನ್ನು ನಿಯೋಜಿಸಿದ ಮಹಿಳೆ, ಆತನ ಚಲನವಲನವನ್ನು ಗಮನಿಸಲು ಕಾರಿಗೆ ಟ್ರ್ಯಾಕಿಂಗ್‌ ಉಪಕರಣ ಅಳವಡಿಸಿದ್ದಳು. ಫೆಬ್ರವರಿ 11ರಂದು ನಾಲ್ವರು ನಿರೂಪಕನ್ನು ಅಪರಿಹರಿಸಿ ಮಹಿಳೆಯ ಕಚೇರಿಗೆ ಕರೆ ತಂದಿದ್ದರು. ನಿರೂಪಕನಿಗೆ ಸರಿಯಾಗಿ ಥಳಿಸಿದ್ದರು. ಜೀವ ಬೆದರಿಕೆಯಿಂದಾಗಿ ಟಿವಿ ನಿರೂಪಕ ಮಹಿಳೆಯ ಕರೆಗಳಿಗೆ ಪ್ರತಿಕ್ರಿಯಿಸಲು ಒಪ್ಪಿಕೊಂಡ ಬಳಿಕ ಆತನನ್ನು ಬಿಡುಗಡೆ ಮಾಡಲಾಗಿತ್ತು.

ಅಪಹರಣಕಾರರಿಂದ ಹೊರ ಬಂದ ನಿರೂಪಕ ಬಳಿಕ ಉಪ್ಪಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ. ಸದ್ಯ ಮಹಿಳೆ ಮತ್ತು ಆಕೆ ನೇಮಿಸಿದ ನಾಲ್ವರು ಅಪಹರಣಕಾರರನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.