ಬೆಳಗಾವಿ :
ನ್ಯಾಯಾಧೀಶರ ಹುದ್ದೆಯ ಎರಡನೇ ಹಂತದ ಪರೀಕ್ಷೆಯಲ್ಲಿ ಒಂದು ವಿಷಯದ ಪರೀಕ್ಷೆ ಚೆನ್ನಾಗಿಲ್ಲ ಎಂದು ಮನನೊಂದ ಯುವ ವಕೀಲೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ. ಬೈಲಹೊಂಗಲ ಪಟ್ಟಣದ ಸರ್ಕಾರಿ ಆಸ್ಪತ್ರೆ ಹಿಂದುಗಡೆಯ ವಿದ್ಯಾಗಿರಿ ನಗರದ ನಿವಾಸಿ ವಿದ್ಯಾ ಸಚಿನ್ ಬೊಂಗಾಳೆ (29) ಎಂಬುವರು ಆತ್ಮಹತ್ಯೆ ಮಾಡಿಕೊಂಡವರು.

ಬೈಲಹೊಂಗಲ ಬಸವೇಶ್ವರ ಆಶ್ರಯ ಕಾಲೋನಿಯ ತವರು ಮನೆಯಲ್ಲಿ ಪರೀಕ್ಷೆಗೆ ತಯಾರಿ ನಡೆಸಿ, ನ.18, 19ರಂದು ಪರೀಕ್ಷೆ ಬರೆದಿದ್ದರು. ಪರೀಕ್ಷೆಯಲ್ಲಿ ಯಶಸ್ಸು ಕಾಣುವುದಿಲ್ಲ ಎಂಬ ಆತಂಕದಿಂದ ನ.24ರಂದು ತವರು ಮನೆಯಲ್ಲಿ ಇಲಿ ಪಾಶಾಣ ಸೇವಿಸಿ ಅಸ್ವಸ್ಥಗೊಂಡಿದ್ದರು. ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊನೆಗೆ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.