ಬೆಳಗಾವಿ : ಆಡಳಿತದಲ್ಲಿ ಹೆಚ್ಚುತ್ತಿರುವ “ಬ್ರಹ್ಮಾಂಡ ಭ್ರಷ್ಟಾಚಾರ”ವನ್ನು ತಡೆಯಲು ಮತ್ತು ವರ್ಗಾವಣೆಗೆ ಸಂಬಂಧಿಸಿ ಸರಕಾರದ ಸುತ್ತೋಲೆ/ಮಾರ್ಗಸೂಚಿಗಳನ್ನು ಅನುಪಾಲನೆ ಮಾಡುವ ಸಲುವಾಗಿ ಸಚಿವರು/ಶಾಸಕರುಗಳ ಶಿಪಾರಸ್ಸು ಪತ್ರಗಳನ್ನು ಆಧರಿಸಿ ಮಾಡಲಾಗುತ್ತಿರುವ ಸರಕಾರಿ ನೌಕರರ ವರ್ಗಾವಣೆಗಳನ್ನು ಶಿಕ್ಷಣ ಇಲಾಖೆಯ ಮಾದರಿಯಲ್ಲಿ ಕೌನ್ಸಲಿಂಗ್ ಪದ್ಧತಿಯ ಮುಖಾಂತರವಾಗಿ ಮಾಡಲು ಕ್ರಮ ಕೈಗೊಳ್ಳದೇ ಇದ್ದಲ್ಲಿ ಸರಕಾರದ ಹಾಗೂ ವರ್ಗಾವಣೆಗೆ ಶಿಫಾರಸ್ಸು ಪತ್ರಗಳನ್ನು ನೀಡುವವರ ಮತ್ತು ವರ್ಗಾವಣೆ ಆದೇಶಗಳನ್ನು ಮಾಡುವ ಇಲಾಖಾ ಮುಖ್ಯಸ್ಥರ ವಿರುದ್ದ ರಾಜ್ಯ ಉಚ್ಛನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲೀಸಲಾಗುವುದು ಎಂದು ರಾಜಪಾಲರು ಹಾಗೂ ಮುಖ್ಯಮಂತ್ರಿಯವರಿಗೆ ಮತ್ತು ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ತಿಳಿಸಿದ್ದಾರೆ.

ಸರಕಾರಿ ನೌಕರರ ಪರವಾಗಿ ಸಂಸತ್ ಸದಸ್ಯರು ರಾಜ್ಯ ವಿಧಾನ ಮಂಡಳಗಳ ಸದಸ್ಯರುಗಳು ಅಥವಾ ಅಧಿಕಾರೇತರ ಸದಸ್ಯರುಗಳಿಂದ ಮನವಿ ಬಂದಲ್ಲಿ ಅಂತಹ ಮನವಿಗಳು ಸರಕಾರಿ ನೌಕರನ ತಿಳುವಳಿಕೆಯಿಂದಲೇ ಬಂದಿದೆ ಎಂದು ಭಾವಿಸತಕ್ಕದ್ದು ಮತ್ತು ಜ್ಞಾಪನದಲ್ಲಿ ಲಗತ್ತಿಸಿರುವ ನಿಗದಿತ ನಮೂನೆಯಲ್ಲಿ ಎಚ್ಚರಿಕೆ ನೀಡಿ ಅದರ ಪ್ರತಿಯನ್ನು ಗೌಪ್ಯವರದಿಯ ಕಡತದಲ್ಲಿಡುವುದು. ಅಲ್ಲದೇ ಇಂತಹ ಮನವಿಗಳು ಅದೇ ಸರಕಾರಿ ನೌಕರರ ಪರವಾಗಿ ಎರಡನೇ ಸಲ ಸ್ವೀಕರಿಸಿದಲ್ಲಿ ಸಂಬಂಧಪಟ್ಟ ನೌಕರರ ವಿರುದ್ದ ಶಿಸ್ತು ಕ್ರಮ ತೆಗೆದುಕೊಳ್ಳುವುದರ ಜೊತೆಗೆ ಅವರನ್ನು ಅಮಾನತ್ತಿನಲ್ಲಿಡಲು ಕೂಡಾ ಪರಿಶೀಲಿಸಬಹುದಾಗಿದೆ. ಅಲ್ಲದೇ ಅಂತಹ ನೌಕರರನ್ನು ಕೋರಿದ ಸ್ಥಳಕ್ಕೆ ವರ್ಗಾವಣೆಯಾಗದಂತೆ ನೋಡಿಕೊಳ್ಳುವುದು ಎಂದು ಸರಕಾರಿ ನೌಕರರ ವರ್ಗಾವಣೆ ಹಾಗೂ ಬಡ್ತಿ ಮತ್ತು ಸೇವಾ ವಿಷಯಗಳಿಗೆ ಸಂಬಂಧಿಸಿ ದಿನಾಂಕ: ೨೨-೦೫-೧೯೯೩ರ ಸುತ್ತೋಲೆಯಲ್ಲಿ ಸುತ್ತೋಲೆಯಲ್ಲಿ ಇರುವ ವಿಷಯವನ್ನು ಈ ಮನವಿಯಲ್ಲಿ ವಿವರಿಸಲಾಗಿದೆ.”

“ಅದರಂತೆ ಯಾವುದೇ ಸರಕಾರಿ ನೌಕರನು ವರ್ಗಾವಣೆಯಾದ ಸ್ಥಳಕ್ಕೆ ನಿಗದಿತ ಅವಧಿಯಲ್ಲಿ ಹೋಗಿ ಹಾಜರಾಗದೇ ಇದ್ದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವರ್ಗಾವಣೆ ನಿಯಂತ್ರಣ ಅಧಿನಿಯಮ ೧೦೬(ಎ)) ರ ಪ್ರಕಾರ ಕ್ರಮ ತೆಗೆದುಕೊಳ್ಳ ಬಹುದಾಗಿದೆ ಎಂದು ಸರಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿ ದಿನಾಂಕ:೦೫/೦೮/೧೯೯೪ ಸುತ್ತೋಲೆಯಲ್ಲಿ ತಿಳಿಸಿರುವುದನ್ನು ಸಹ ಇದೇ ಮನವಿಯಲ್ಲಿ ವಿವರಿಸಲಾಗಿದೆ.”

ಇತ್ತೀಚಿನ ಪ್ರತಿಯೊಂದು ಸರಕಾರಗಳಲ್ಲಿ ಸಚಿವರು/ಲೋಕಸಭಾ/ರಾಜ್ಯಸಭಾ/ವಿಧಾನ ಮಂಡಳಗಳ/ಜನಪ್ರತಿನಿಧಿಗಳ ಶಿಪಾರಸ್ಸು ಪತ್ರಗಳನ್ನು ಆಧರಿಸಿಯೇ ಅವರುಗಳು ಪತ್ರಗಳಲ್ಲಿ ಸೂಚಿಸಿರುವ ಸ್ಥಳಕ್ಕೆ ಸರಕಾರಿ ಅಧಿಕಾರಿ/ನೌಕರರ ವರ್ಗಾವಣೆಗಳನ್ನು ಮಾಡಲಾಗುತ್ತಿದೆ. ಹೀಗಾಗಿ ಈ ಶಿಫಾರಸ್ಸು ಪತ್ರಗಳನ್ನು ಪಡೆಯಲು ಸರಕಾರದ ಅಧಿಕಾರಿ/ನೌಕರರು ಜನಪ್ರತಿನಿಧಿಗಳಿಗೆ ಅವರು ಹೇಳಿದಷ್ಟು ಹಣ ನೀಡುವುದು ಅನಿವಾರ್ಯವಾಗುತ್ತದೆ. ಹೀಗಾಗಿ ಪ್ರತಿಯೊಬ್ಬ ಸಚಿವರು, ಶಾಸಕರು, ಜನಪ್ರತಿನಿಧಿಗಳಿಗೆ ಸರಕಾರಿ ನೌಕರರ ವರ್ಗಾವಣೆಗೆ ಶಿಫಾರಸ್ಸು ಪತ್ರಗಳನ್ನು ನೀಡುವುದೇಂದರೆ ಇದೊಂದು ಬಂಡವಾಳದ ಅವಶ್ಯಕತೆಯೇ ಇಲ್ಲದ ಹಣ ಗಳಿಸುವ ಪ್ರಮುಖ ಉದ್ದಿಮೆಯಾಗಿ ಮಾರ್ಪಟ್ಟಿದೆ ಎಂಬ ವಿಷಯವನ್ನು ಕೂಡಾ ಉಲ್ಲೇಖಿಸಿ ಸರಕಾರದ ಗಮನ ಸೆಳೆಯಲಾಗಿದೆ.

ತಾವುಗಳು ಕೇಳಿರುವ ಸ್ಥಳಕ್ಕೆ ವರ್ಗಾವಣೆ ಹೊಂದಲು ಜನ ಪ್ರತಿನಿಧಿಗಳಿಗೆ ನೀಡಿರುವ ಈ ಹಣವನ್ನು ಅಧಿಕಾರಿ/ನೌಕರರು ಕಚೇರಿಯ ಕೆಲಸ ಕಾರ್ಯಗಳಿಗಾಗಿ ತಮ್ಮ ಹತ್ತಿರ ಬರುವ ಸಾರ್ವಜನಿಕರಿಂದ ಮನಸಿಗೆ ಬಂದ ಹಾಗೆ ಲಂಚದ ರೂಪದಲ್ಲಿ ಹಣ ವಸೂಲಿ ಮಾಡುವುದು ಅನಿವಾರ್ಯವಾಗುತ್ತಿದೆ. ಇದರಿಂದ್ದಾಗಿ ಇಂದು ಸರಕಾರದ ಪ್ರತಿಯೊಂದು ಇಲಾಖೆಗಳ ಆಡಳಿತದಲ್ಲಿ “ಬ್ರಹ್ಮಾಂಡ ಭ್ರಷ್ಟಾಚಾರ” ತಾಂಡವವಾಡುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದೊಂದು ದಿನ “ರಾಜಕಾರಣ” ಎಂಬ ಪದವು “ಭ್ರಷ್ಟಾಚಾರ” ಎಂದು ಬದಲಾದರೆ ಯಾರೂ ಅಚ್ಚರೀ ಪಡಬೇಕಾಗಿಲ್ಲ. ಎಂದೂ ಸಹ ಈ ಮನವಿಯಲ್ಲಿ ತಿಳಿಸಲಾಗಿದೆ.
ಕಾರಣ ೨೦೨೩-೨೪ನೇ ಸಾಲಿಗೆ ಸಂಬಂಧಿಸಿ ಪ್ರತಿಯೊಂದು ಇಲಾಖೆಯಲ್ಲಿರುವ ವರ್ಗಾವಣೆಯ ಕಡತಗಳನ್ನು ಕೂಡಲೇ ತರಿಸಿಕೊಂಡು ಶಿಫಾರಸ್ಸು ಪತ್ರಗಳನ್ನು ಆದರಿಸಿ ಮಾಡಿದ ವರ್ಗಾವಣೆಗಳನ್ನು ರದ್ದುಗೊಳಿಸುವಂತೆ ಮತ್ತು ಅಂಥಹ ಅಧಿಕಾರಿ/ನೌಕರರ ಮೇಲೆ ಕ್ರಮ ಕೈಗೊಳ್ಳುವಂತೆ ಅಲ್ಲದೇ ವರ್ಗಾವಣೆಯ ಸಲುವಾಗಿ ಸರಕಾರವೇ ರೂಪಿಸಿರುವ ದಿನಾಂಕ: ೨೨/೦೫/೧೯೯೩ ಮತ್ತು ದಿನಾಂಕ: ೦೫/೦೮/೧೯೯೪ ಹಾಗೂ ದಿನಾಂಕ: ೧೦/೦೬/೨೦೧೩ರ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಪ್ರಕಟಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ವರ್ಗಾವಣೆ ಮಾಡಲಾಗಿದ್ದರೆ ವರ್ಗಾವಣೆ ಆದೇಶ ಮಾಡಿರುವ ಇಲಾಖಾ ಮುಖ್ಯಸ್ಥರ ಮೇಲು ಕೂಡಾ ಕಾನೂನು ಕ್ರಮಕ್ಕೆ ಈ ಮನವಿಯಲ್ಲಿ ಒತ್ತಾಯಿಸಲಾಗಿದ್ದು, ಸಕಾಲ ಸೇವೆಗಳಲ್ಲಿ ಪ್ರತಿಯೊಂದಕ್ಕೂ ಸಮಯ ನಿಗದಿ ಮಾಡಿರುವಂತೆ ನೌಕರರ ವರ್ಗಾವಣೆಗೂ ಆದೇಶ ಹೊರಡಿಸಲು ಕಾಲ ನಿಗದಿ ಮಾಡಲು ಪ್ರಸ್ತಾಪಿಸಲಾಗಿದೆ.

ಒಟ್ಟಾರೆಯಾಗಿ ಆಡಳಿತದಲ್ಲಿರುವ ಭ್ರಷ್ಟಾಚಾರವನ್ನು ತಡೆಗಟ್ಟಲು ಕೌನ್ಸಲಿಂಗ್ ಮಾದರಿಯ ವರ್ಗಾವಣೆ/ಬಡ್ತಿಗಳನ್ನು ಜಾರಿಗೆ ತರಲು ಪ್ರತಿಯೊಂದು ಇಲಾಖೆಯ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ/ನಿರ್ದೇಶನಗಳನ್ನು ನೀಡುವಂತೆ ಸರಕಾರಕ್ಕೆ ಬರೆದ ಮನವಿಯಲ್ಲಿ ವಿನಂತಿಸಲಾಗಿದೆ. ಒಂದು ವೇಳೆ ಸೂಕ್ತ ಕ್ರಮ ಕೈಗೊಂಡು ಹಿಂಬರಹ/ದಾಖಲೆಗಳನ್ನು ನೀಡದೇ ಇದ್ದಲ್ಲಿ ಅನಿವಾರ್ಯವಾಗಿ ಸರಕಾರ ಹಾಗೂ ವರ್ಗಾವಣೆ ನಿಯಮಾವಳಿ ಗೊತ್ತಿದ್ದರೂ ಕೂಡಾ ಶಿಫಾರಸ್ಸು ಪತ್ರಗಳನ್ನು ನೀಡಿರುವ ಸಚಿವರುಗಳು ಮತ್ತು ವರ್ಗಾವಣೆ ಆದೇಶಗಳನ್ನು ಮಾಡಿರುವ ಸಂಬಂಧಿಸಿದ ಇಲಾಖಾ ಮುಖ್ಯಸ್ಥರ ವಿರುದ್ಧ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಬೇಕಾಗವುದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.