ಬೆಳಗಾವಿ : ಸುರಕ್ಷಿತವಲ್ಲದ ಆಹಾರ ಪೂರೈಸಿಸುವವರಿಗೆ ಆಹಾರ ಹಾಗೂ ಹಾಲಿನ ಕಲಬೆರಕೆ ಮಾಡುವವರಿಗೆ 6 ತಿಂಗಳ ಜೈಲು ವಾಸ ಹಾಗೂ 5 ಲಕ್ಷದ ವರೆಗೆ ದಂಡ ವಿಧಿಸಲಾಗುತ್ತದೆ. ಜಿಲ್ಲೆಯ ಎಲ್ಲ ಆಹಾರ ವಹಿವಾಟು ಮಾಡುವವರು, ಹೋಟೆಲ್ ಮಾಲೀಕರು ಆಹಾರ ತಯಾರಿಸುವವರು, ಹಾಲಿನ ಉತ್ಪಾದಕರು ಹಾಗೂ ಇತರೆ ಯಾವುದೇ ಆಹಾರ ವರ್ತಕರು ಕಡ್ಡಾಯವಾಗಿ ಎಫ್.ಎಸ್.ಎಸ್.ಎ ಅಡಿಯಲ್ಲಿ ನೋಂದಣಿ ಪರವಾನಿಗೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಎಚ್ಚರಿಕೆ ನೀಡಿದರು.
ಆಹಾರ ಸುರಕ್ಷಿತಾ ಮತ್ತು ಗುಣಮಟ್ಟ ಕಾಯ್ದೆ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಜಿಲ್ಲಾಮಟ್ಟದ ಸಲಹಾ ಸಮಿತಿ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಅಂಗನವಾಡಿ, ರೇಶನ್ ಅಂಗಡಿ, ಎಸ್‌ಟಿ, ಎಸ್‌ಸಿ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತ ಹಾಸ್ಟೆಲ್, ಪಡಿತರ ವಿತರಣಾ ಕೇಂದ್ರ, ಪಿಜಿ ಕೇಂದ್ರಗಳು, ಔಷದಿ ಮಳಿಗೆಗಳು ಇಲ್ಲಿಯವರೆಗೆ ಶೇಕಡಾ 9೦ ರಷ್ಟು ನೋಂದಣಿ ಪರವಾನಿಗೆ ಪಡೆದಿರುವುದಿಲ್ಲ. ಇಂಥವರು ಸುರಕ್ಷಿತ ಆಹಾರ ಪೂರೈಸಬೇಕು. ಎಲ್ಲ ಅಧಿಕಾರಿಗಳು ಸಹ ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಿದರು.
ಎಫ್.ಎಸ್.ಎಸ್.ಎ ಬೆಳಗಾವಿ, ಜಿಲ್ಲಾ ಅಂಕಿತ ಅಧಿಕಾರಿ ಡಾ. ಜಗದೀಶ ಜಿಂಗಿ ಮಾತನಾಡಿ, ಸುರಕ್ಷಿತವಲ್ಲದ ಆಹಾರ, ಆಹಾರವೇ ಅಲ್ಲ. ಆಹಾರವು ಕೇವಲ ಎಲೆಯಲ್ಲಿ ಊಟ ಬಡಿಸುವುದಲ್ಲ, ಮನಸ್ಸು ಹಾಗೂ ದೇಹದ ಆರೋಗ್ಯಕ್ಕೆ ಹಿತಕರವಾಗಿರಬೇಕು. ನಾವು ಸೇವಿಸುವ ಆಹಾರ ಜನರಿಗೆ ಹಾಗೂ ಪರಿಸರಕ್ಕೆ ಹಿತಕರವಾಗಿರಬೇಕು. ಸುರಕ್ಷಿತ ಮತ್ತು ಆರೋಗ್ಯಕರ ಆಹಾರ ಸಾಮಾನ್ಯ ಜನರಿಗೆ ತಲುಪಬೇಕು. ಬಳಕೆದಾರನ ಅಪೇಕ್ಷಗೆ ತಕ್ಕಂತೆ ಆರೋಗ್ಯಕ್ಕೆ ಹಾನಿಕಾರಕವಲ್ಲದ ಆಹಾರ ಪೂರೈಸಬೇಕು. ಉತ್ಪಾದನೆ, ಸಂಸ್ಕರಣೆ, ವಿತರಣೆ, ಸಾಗಾಣಿಕೆ, ಮಾರಾಟ ಎಲ್ಲಾ ಹಂತಗಳಲ್ಲೂ ಸುರಕ್ಷಿತವಾಗಿ, ಉತ್ಪಾದನೆಯಿಂದ ಉಣ್ಣುವವರೆಗೆ ಆಹಾರ ಸುರಕ್ಷತೆ ವಹಿಸಬೇಕು ಎಂದರು.
11 ಜಿಲ್ಲೆಗೆ ಕಾರ್ಯಕ್ರಮ ನಿರ್ವಹಣೆಗಾಗಿ ಪ್ರತಿ ಜಿಲ್ಲೆಗೆ ರೂ. 5 ಲಕ್ಷ ಬಿಡುಗಡೆ ಮಾಡಲಾಗಿದ್ದು, ನಮ್ಮ ಜಿಲ್ಲೆಯ ಜಿಲ್ಲಾ ಮಟ್ಟದ ಸಲಹಾ ಸಮಿತಿಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷರಾಗಿರುವುದರಿಂದ ಈ ಮೊತ್ತವನ್ನು ಮಾರ್ಗಸೂಚಿಯ ಪ್ರಕಾರ ವೆಚ್ಚ ಮಾಡಲು ಅಪರ ಜಿಲ್ಲಾಧಿಕಾರಿಗಳ ಅನುಮತಿ ಪಡೆಯಲಾಯಿತು ಎಂದು ಹೇಳಿದರು.
ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ವಿಜಯ ಸಾಲಿಯಾನ್ ಮತ್ತು ಅಜಯ ಪೈ, ಕೃಷಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕಿನ ಆಹಾರ ಸುರಕ್ಷತಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.