ಬೆಳಗಾವಿ : ಇಲ್ಲಿಯ ಹಿಂಡಲಗಾ ಕೇಂದ್ರ ಕಾರಾಗೃಹದ ಮೇಲೆ ಬೆಳಗಾವಿ ನಗರ ಪೊಲೀಸರು ರವಿವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.

ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ನಗರ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ)ರೋಹನ್ ಜಗದೀಶ್ ಅವರ ನೇತೃತ್ವದಲ್ಲಿ 140ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿ ಕೈದಿಗಳಿಂದ ಮಹತ್ವದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಕಾರಾಗೃಹದಲ್ಲಿ ಇದ್ದ ಪೊಲೀಸರು ತೀವ್ರ ತಪಾಸಣೆ ನಡೆಸಿದ್ದಾರೆ.

ಪತ್ರಕರ್ತರ ಜೊತೆ ಮಾತನಾಡಿದ, ರೋಹನ ಜಗದೀಶ ಅವರು ಐವರು ಸಹಾಯಕ ಪೊಲೀಸ್ ಆಯುಕ್ತರು ಮತ್ತು ಸಿಬ್ಬಂದಿಗಳೊಂದಿಗೆ ಹಿಂಡಲಗಾ ಜೈಲಿನ ಮೇಲೆ ದಾಳಿ ಮಾಡಲಾಗಿದೆ. ಕೈದಿಗಳಿಂದ ತಂಬಾಕು, ಸಿಗರೇಟ್ ಪ್ಯಾಕುಗಳು ದೊರೆಕಿವೆ. ಭದ್ರತೆ ಇದ್ದರೂ ಇವೆಲ್ಲ ವಸ್ತುಗಳು ಒಳಗೆ ಹೇಗೆ ಹೋಗುತ್ತವೆ ಎಂಬ ಬಗ್ಗೆ ತನಿಖೆ ಮಾಡಬೇಕಾಗಿದೆ. ಕೈದಿಗಳ ಬಳಿ ಮೊಬೈಲ್ ಸಿಕ್ಕಿಲ್ಲ, ಆದರೆ, ಮೊಬೈಲ್ ಚಾರ್ಜರ್ ದೊರಕಿವೆ. ಬ್ಲೂಟೂತ್ ಡಿವೈಸ್ ಸಿಕ್ಕಿದ್ದು ಎಲ್ಲವನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ತಿಳಿಸಿದರು.