ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನ್ಯೂಸ್ 18 ನಡೆಸಿದ್ದ ಮೆಗಾ ಒಪಿನಿಯನ್ ಪೋಲ್ ನ ಫಲಿತಾಂಶಗಳು ಪ್ರಕಟಗೊಂಡಿದೆ. ಬಿಜೆಪಿ ನೇತೃತ್ವದ ಎನ್‌ಡಿಎ 411, ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟ 105 ಮತ್ತು ಇತರ ಪಕ್ಷಗಳು 27 ಸ್ಥಾನಗಳಲ್ಲಿ ಗೆಲುವು ಸಾಧಿಸಲಿವೆ. 21 ರಾಜ್ಯಗಳು, 518 ಕ್ಷೇತ್ರಗಳು ಮತ್ತು 1 ಲಕ್ಷಕ್ಕೂ ಹೆಚ್ಚು ಜನರನ್ನು ಒಳಗೊಂಡು ಈ ಸಮೀಕ್ಷೆ ನಡೆಸಲಾಗಿದೆ.

ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಬಹುದು ಎನ್ನುವ ವಿವರ ಇಲ್ಲಿದೆ. ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ 28 ಸ್ಥಾನಗಳ ಪೈಕಿ 25, ಅಸ್ಸಾಂನ 14 ಸ್ಥಾನಗಳಲ್ಲಿ 12 ಮತ್ತು ರಾಜಸ್ಥಾನ, ಉತ್ತರಾಖಂಡದಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ.

ತಮಿಳುನಾಡಿನಲ್ಲಿ ಡಿಎಂಕೆ 30 ಸ್ಥಾನಗಳನ್ನು ಗೆಲ್ಲುವ ಮೂಲಕ ಇಂಡಿಯಾ ಒಕ್ಕೂಟವನ್ನು ಮುನ್ನಡೆಸಲಿದೆ ಎಂದು ಸಮೀಕ್ಷೆ ಸೂಚಿಸಿದೆ. ಬಿಜೆಪಿ ನೇತೃತ್ವದ ಎನ್‌ಡಿಎ 5 ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಹೆಜ್ಜೆ ಗುರುತನ್ನು ಮೂಡಿಸಲಿದೆ. ಆಂಧ್ರಪ್ರದೇಶದಲ್ಲಿ ಎನ್‌ಡಿಎ 18 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ 7 ಕಡೆ ಗೆಲುವು ದಾಖಲಿಸಲಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಒಂದು ಸ್ಥಾನದಲ್ಲಿಯೂ ಗೆಲುವು ಸಾಧಿಸುವುದಿಲ್ಲ. ಗುಜರಾತ್‌ನಲ್ಲಿ ಎನ್‌ಡಿಎ ಕ್ಲೀನ್ ಸ್ವೀಪ್ ಮಾಡಲಿದೆ. ಅಂದರೆ 26 ಸ್ಥಾನಗಳನ್ನೂ ಗೆಲ್ಲಲಿದೆ. ಮಹಾರಾಷ್ಟ್ರದ 48 ಲೋಕಸಭಾ ಸ್ಥಾನಗಳಲ್ಲಿ ಎನ್‌ಡಿಎ 41 ಸ್ಥಾನಗಳಲ್ಲಿ ಗೆಲುವಿನ ಪತಾಕೆ ಹಾರಿಸಲಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ 7 ಸ್ಥಾನಗಳಿಗೆ ಕುಸಿಯಲಿದೆ ಎಂದು ಸಮೀಕ್ಷೆ ಹೇಳಿದೆ.

ಒಡಿಶಾದಲ್ಲಿ ಬಿಜೆಪಿಗೆ 13 ಮತ್ತು ಬಿಜೆಡಿಗೆ 8 ಸ್ಥಾನ ಲಭಿಸಲಿದೆ. ಪಶ್ಚಿಮ ಬಂಗಾಳದ 42 ಸ್ಥಾನಗಳಲ್ಲಿ ಎನ್‌ಡಿಎ 25 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ರಾಜ್ಯದ ಆಡಳಿತಾರೂಢ ಟಿಎಂಸಿ 17 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಇಂಡಿಯಾ ಮೈತ್ರಿಕೂಟಕ್ಕೆ ಒಂದು ಸೀಟು ಸಹಾ ಲಭಿಸದು. ಜಾರ್ಖಂಡ್‌ನ 14 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಬಿಜೆಪಿ ಗೆಲ್ಲುವ ಸಾಧ್ಯತೆಯಿದೆ. ಇಂಡಿಯಾ ಬ್ಲಾಕ್‌ನ ಭಾಗವಾಗಿರುವ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ 2 ಸ್ಥಾನಗಳನ್ನು ಪಡೆಯಲಿದೆ ಎಂದು ಊಹಿಸಲಾಗಿದೆ.

ಛತ್ತೀಸ್‌ಗಢದಲ್ಲಿ ಎನ್‌ಡಿಎ 10 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. 1 ಸೀಟು ಇಂಡಿಯಾ ಒಕ್ಕೂಟದ ಪಾಲಾಗಲಿದೆ. ತೆಲಂಗಾಣದ 17 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 8, ಇಂಡಿಯಾ ಫ್ರಂಟ್ 6, ಭಾರತ್ ರಾಷ್ಟ್ರ ಸಮಿತಿ 2 ಮತ್ತು ಇತರರು 1 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಒಡಿಶಾದಲ್ಲಿ ಎನ್‌ಡಿಎ 13 ಮತ್ತು ಬಿಜೆಡಿ 8 ಸ್ಥಾನಗಳನ್ನು ಪಡೆಯಬಹುದು. ರಾಜಸ್ಥಾನದ ಎಲ್ಲ 25 ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಎನ್‌ಡಿಎ ಉತ್ತರಾಖಂಡದ ಎಲ್ಲ 5 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಸಮೀಕ್ಷೆ ನುಡಿದಿದೆ.

ಅತೀ ಹೆಚ್ಚು ಕ್ಷೇತ್ರಗಳನ್ನು ಒಳಗೊಂಡ ಉತ್ತರ ಪ್ರದೇಶದಲ್ಲಿ ಎನ್‌ಡಿಎ ಪಾರಮ್ಯ ಮೆರೆಯಲಿದೆ. ಇಲ್ಲಿ ಎನ್‌ಡಿಎಗೆ 77, ಇಂಡಿಯಾ ಒಕ್ಕೂಟಕ್ಕೆ 2 ಮತ್ತು ಬಿಎಸ್‌ಪಿಗೆ 1 ಸ್ಥಾನ ಸಿಗಲಿದೆ. ಪಂಜಾಬ್‌ನಲ್ಲಿ ಕಾಂಗ್ರೆಸ್‌ಗೆ 7, ಎನ್‌ಡಿಎಗೆ 3, ಶಿರೋಮಣಿ ಅಕಾಳಿ ದಳಕ್ಕೆ 2 ಮತ್ತು ಎಎಪಿಗೆ 1 ಸೀಟು ಲಭಿಸಲಿದೆ. ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ಗೆ 14, ಎಡಪಕ್ಷಗಳ ಒಕ್ಕೂಟ ಎಲ್‌ಡಿಎಫ್‌ 4 ಮತ್ತು ಎನ್‌ಡಿಎ 2 ಸ್ಥಾನಗಳಲ್ಲಿ ಜಯ ಗಳಿಸುವ ಸಾಧ್ಯತೆ ಇದೆ.