ದೆಹಲಿ :
ಲೋಕಸಭಾ ಚುನಾವಣೆಗೆ ಇಂದು ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ಘೋಷಿಸಲಿದೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾದ ರಾಜೀವ್‌ಕುಮಾ‌ರ್, ಜ್ಞಾನೇಶ್‌ಕುಮಾ‌ರ್ ಮತ್ತು ಸುಖ್‌ಬೀ‌ರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಇಂದು ಮಧ್ಯಾಹ್ನ 3 ಕ್ಕೆ ಚುನಾವಣೆಯ ದಿನಾಂಕವನ್ನು ಘೋಷಿಸಲಿದ್ದಾರೆ. ಒಟ್ಟು 543 ಲೋಕಸಭಾ ಕ್ಷೇತ್ರಗಳ ಜೊತೆಗೆ ಒರಿಸ್ಸಾ, ಆಂಧ್ರಪ್ರದೇಶ ಮತ್ತು ಜಮ್ಮುಕಾಶ್ಮೀರ ವಿಧಾನಸಭೆ ಚುನಾವಣೆಗಳಿಗೂ ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.

2019ರ ಲೋಕಸಭಾ ಚುನಾವಣೆಗೆ ದೇಶಾದ್ಯಂತ 7 ಹಂತದ ಮತದಾನ ನಡೆದಿತ್ತು. ಈ ಬಾರಿಯೂ 7 ಹಂತದಲ್ಲೇ ಮತದಾನ ನಡೆಯುವ ಸಾಧ್ಯತೆ ಇದೆ. ಕಳೆದ ಬಾರಿ 2019ರ ಮಾರ್ಚ್ 10ರಂದು ಚುನಾವಣಾ ದಿನಾಂಕವನ್ನು ಘೋಷಣೆ ಮಾಡಲಾಗಿತ್ತು. ಏಪ್ರಿಲ್ 11ರಿಂದ ಮೇ 19ರವರೆಗೆ 7 ಹಂತಗಳಲ್ಲಿ ಮತದಾನ ನಡೆದಿತ್ತು. ಮೇ.25ರಂದು ಫಲಿತಾಂಶ ಪ್ರಕಟಗೊಂಡಿತ್ತು. ಕರ್ನಾಟಕದ 28 ಕ್ಷೇತ್ರಗಳಿಗೆ ಮೇ 18 ಮತ್ತು ಮೇ 23ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ತಲಾ 14 ಕ್ಷೇತ್ರಗಳಿಗೆ 2 ಹಂತದಲ್ಲಿ ಮತದಾನವಾಗಿತ್ತು.

ಲೋಕಸಭೆ ಅಥವಾ ವಿವಿಧ ರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ ಬಗ್ಗೆ ಸುದ್ದಿಗೋಷ್ಠಿ ನಡೆಸುವ ವಿಚಾರವನ್ನು ಸಾಮಾನ್ಯವಾಗಿ ಒಂದು ದಿನ ಮೊದಲೇ ಆಯೋಗತಿಳಿಸುವುದಿಲ್ಲ. ದಿನಾಂಕ ಘೋಷಿಸುವ ಸಮಯಕ್ಕೆ ಮೂರ್ನಾಲ್ಕು ತಾಸು ಮೊದಲು ಮಾಹಿತಿ ನೀಡುತ್ತದೆ. ಆದರೆ ಈ ಬಾರಿ ಅಚ್ಚರಿಯ ರೀತಿಯಲ್ಲಿ ಒಂದು ದಿನ ಮೊದಲೇ ಚುನಾವಣಾ ಆಯೋಗ ದಿನಾಂಕ ಘೋಷಣೆ ಕುರಿತ ಮಾಹಿತಿ ನೀಡಿದೆ.

ನೀತಿ ಸಂಹಿತೆ ಜಾರಿ

• ಸರ್ಕಾರದಿಂದ ಯಾವುದೇ ಅನುದಾನ ಕೊಡುವುದು ಮತ್ತು ಅನುದಾನ ಕೊಡುವ ಕುರಿತು ಆಶ್ವಾಸನೆಗೆ ತಡೆ

• ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ
ನೆರವೇರಿಸುವುದಕ್ಕೆ ಅವಕಾಶ ಇರದು.

• ಅಭಿವೃದ್ಧಿ ಕಾಮಗಾರಿಗಳ ಕುರಿತು ಜನರಿಗೆ ಸರ್ಕಾರ ಯಾವುದೇ ಆಶ್ವಾಸನೆ ನೀಡುವಂತಿಲ್ಲ

• ಆಡಳಿತ ಪಕ್ಷದಿಂದ ಚುನಾವಣಾ ಕರ್ತವ್ಯಕ್ಕೆ ಸರ್ಕಾರಿ ವಾಹನ ಮತ್ತು ಇತರ ಸೇವೆಗಳನ್ನು ಬಳಸಿಕೊಳ್ಳುವಂತಿಲ್ಲ

• ಸರ್ಕಾರಿ ವಿಶ್ರಾಂತಿ ಗೃಹಗಳಲ್ಲಿ ಸಾರ್ವಜನಿಕ ಸಭೆ ಮತ್ತು ಚುನಾವಣಾ ರಣತಂತ್ರ ರೂಪಿಸಲು ಬಳಸಿಕೊಳ್ಳುವಂತಿಲ್ಲ

• ಸರ್ಕಾರಿ ಬೊಕ್ಕಸದ ಹಣದಲ್ಲಿ ಜಾಹೀರಾತು ನೀಡುವಂತಿಲ್ಲ

• ಸರ್ಕಾರಿ ಮಾಧ್ಯಮದಲ್ಲಿ ಸರ್ಕಾರದ ಸಾಧನೆಗಳನ್ನು ಬಿಂಬಿಸುವಂತಹ ಲೇಖನಗಳನ್ನು ಪ್ರಕಟಿಸುವುದಕ್ಕೆ ಬ್ರೇಕ್.