ಭಟ್ಕಳ : ಭಟ್ಕಳ ಶ್ರೀರಾಮ್ ಪೈನಾನ್ಸ್ ಶಾಖೆಯಲ್ಲಿ ೮೯ ಲಕ್ಷಕ್ಕೂ ಅಧಿಕ ಹಣವನ್ನು ದುರುಪಯೋಗ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಬಂಧಕರಾಗಿ ಕರ್ತವ್ಯ ನಿರ್ವಹಿಸಿದ್ದ ಮೂವರ ವಿರುದ್ಧ ಮೇ ೨೯ರಂದು ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಆರೋಪಿತರನ್ನು ರಾಘವೇಂದ್ರ ರಾಜೀವ ಸ್ವಾಮಿ ಕುಂದಾಪುರ, ಆನಂದ ಮಾದೇವ ನಾಯ್ಕ ಬೆಳ್ನಿ, ರಾಘವೇಂದ್ರ ನಾಯ್ಕ ಆಸರಕೇರಿ ಎಂದು ತಿಳಿದು ಬಂದಿದೆ. ಅವರು ಶಾಖೆಯಲ್ಲಿ ಕೆಲಸ ಮಾಡುವ ಅವಧಿಯಲ್ಲಿ ೨೦೨೩ರ ಜನವರಿ ೧ರಿಂದ ೨೦೨೪ರ ಮೇ ೨ರ ಅವಧಿಯಲ್ಲಿ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಪೈನಾನ್ಸಿನಲ್ಲಿ ಸಾಲ ಪಡೆದ ಕೆಲವು ಸಾಲಗಾರರಿಗೆ ಸಂಬಂಧಿಸಿದ ವಾಹನಗಳ ಸಾಲವನ್ನು ಪೂರ್ತಿಯಾಗಿ ಚುಕ್ತಾಗೊಳಿಸಿದ್ದಾರೆ. ಕಂಪನಿಯ ಹೈಪೋತಿಕೇಶನ್ ಸರ್ಟಿಪಿಕೇಟ್ ತಯಾರು ಮಾಡಿದ್ದಾರೆ. ಕಂಪನಿಯ ಸೀಲ್ ಅನ್ನು ಬಳಸಿ ಅದಕ್ಕೆ ಮುಖ್ಯ ಕಚೇರಿಯಿಂದ ಸಹಿ ಪಡೆಯದೆ ಅವರೇ ಅದಕ್ಕೆ ನಕಲಿ ಸಹಿ ಮಾಡಿದ್ದಾರೆ. ಅದನ್ನು ಆರ್.ಟಿ.ಓ.ದಲ್ಲಿ ನೀಡಿ ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ಕಂಪನಿಗೆ ಹಾಗೂ ಗ್ರಾಹಕರಿಗೆ ಮೋಸ ಮಾಡಿದ್ದಾರೆ. ಸದರಿ ಆರೋಪಿತರು ಕಂಪನಿಯಲ್ಲಿ ಸಾಲ ಪಡೆದ ಸಾಲ ಮರುಪಾವತಿ ಮಾಡದೇ ಇರುವ ಗ್ರಾಹಕರ ವಾಹನಗಳನ್ನು ಶ್ರೀರಾಮ ಫೈನಾನ್ಸಿನ ಮೇಲಾಧಿಕಾರಿಗಳ ಅನುಮೋದನೆಯನ್ನು ಪಡೆಯದೇ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಸದರಿ ವಾಹನವನ್ನು ಕಂಪನಿಯ ನಿಯಮಾವಳಿ ಪಾಲಿಸದೆ ಮಾರಾಟ ಮಾಡಿದ್ದಾರೆ. ಬಂದ ಹಣವನ್ನು ತಮ್ಮ ಸ್ವಂತ ಖರ್ಚಿಗೆ ಬಳಸಿಕೊಂಡು ಕಂಪನಿಗೆ ಹಾಗೂ ಗ್ರಾಹಕರಿಗೆ ಮೋಸ, ವಂಚನೆ, ನಂಬಿಕೆ ದ್ರೋಹವನ್ನು ಎಸಗಿರುತ್ತಾರೆ. ಸದರಿ ಆರೋಪಿತರು ಕಳೆದ ಕೆಲವು ತಿಂಗಳುಗಳಿಂದ ಕೆಲವು ಗ್ರಾಹಕರಿಂದ ಲೋನ್ ಸೆಟ್ಲುಮೆಂಟ್ ಮಾಡುತ್ತೇವೆ ಎಂದು ಅವರಿಂದ ಹಣವನ್ನು ಪಡೆದಿದ್ದಾರೆ. ಕಂಪನಿಗೆ ಸದರಿ ಹಣವನ್ನು ಮರು ಪಾವತಿ ಮಾಡದೇ ತಮ್ಮ ಸ್ವಂತ ಖರ್ಚಿಗೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಗ್ರಾಹಕರಿಂದ ಸಾಲದ ಕಂತುಗಳನ್ನು ಸಾಲದ ಖಾತೆಗೆ ಜಮಾ ಮಾಡುತ್ತೇವೆ ಎಂದು ಸುಳ್ಳು ಹೇಳಿ ಅವರಿಂದ ಹಣವನ್ನು ಪಡೆದಿದ್ದಾರೆ. ಗ್ರಾಹಕರ ಸಾಲದ ಖಾತೆಗೆ ಕಟ್ಟದೇ ತಮ್ಮ ಸ್ವಂತ ಖರ್ಚಿಗೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಕಂಪನಿಗೆ ವಂಚಿಸಿ, ನಂಬಿಕೆ ದ್ರೋಹ ಮಾಡಿ ಕರ್ತವ್ಯ ಲೋಪ ಎಸಗಿ ಒಟ್ಟೂ ೮೯,೭೯,೫೨೪ ರೂ. ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಶ್ರೀರಾಮ್ ಪೈನಾನ್ಸ್ ಜಿ.ಪಿ. ಹೋಲ್ಡರ್ ನವೀನ ಪೂಜಾರಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಸಿ.ಪಿ.ಐ. ಚಂದನ ಗೋಪಾಲ್ ಇಬ್ಬರು ಆರೋಪಿಗಳಾದ ಆನಂದ ನಾಯ್ಕ ಹಾಗೂ ರಾಘವೇಂದ್ರ ನಾಯ್ಕರನ್ನು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ರಾಘವೇಂದ್ರ ರಾಜೀವ್ ಸ್ವಾಮಿ ಪತ್ತೆಗೆ ಬಲೆ ಬೀಸಿದ್ದಾರೆ.