ತುಳುನಾಡಿನಲ್ಲಿ ದೈವದ ಕಾರಣಿಕ ಆಗಾಗ ಸುದ್ದಿಯಾಗುತ್ತದೆ. ಕರಾವಳಿ ಜನತೆ ದೈವ-ದೇವರನ್ನು ಇನ್ನಿಲ್ಲದಂತೆ ಆರಾಧಿಸುತ್ತಾರೆ. ಅವರ ಭಕ್ತಿಗೆ ತಕ್ಕಂತೆ ದೈವ-ದೇವರು ತಮ್ಮ ಕಾರಣಿಕ ತೋರಿಸುವುದು ಆಧುನಿಕ ಯುಗದಲ್ಲೂ ಬೆರಗು ಮೂಡಿಸುತ್ತದೆ. ಇತ್ತೀಚಿಗೆ ನಡೆದ ಘಟನೆಯೊಂದು ಇದೀಗ ಕರಾವಳಿಯಲ್ಲಿ ಬಹುದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಆರೋಪಿ ಎಲ್ಲಿದ್ದರೂ ಪೊಲೀಸರ ಮುಂದೆ ತಂದು ನಿಲ್ಲಿಸುತ್ತೇನೆ.ಹೀಗೆಂದು ಪಂಜುರ್ಲಿ ತನ್ನ ಭಕ್ತರಿಗೆ ನುಡಿ ನೀಡಿತು. ಅದು ಈಗ ನಿಜವಾಗಿದೆ.
ಉಡುಪಿ : ಆರೋಪಿ ಎಲ್ಲಿದ್ದರೂ ಪೊಲೀಸರ ಮುಂದೆ ತಂದು ನಿಲ್ಲಿಸುತ್ತೇನೆ.
ಹೀಗೆಂದು ಪಂಜುರ್ಲಿ ದೈವ ಮನೆಯವರಿಗೆ ಅಭಯ ನೀಡಿತ್ತು. ಇದೀಗ ಕೊಲೆ ಆರೋಪಿ ಮೇ 23 ರಂದು ತಾನಾಗಿಯೇ ನ್ಯಾಯಾಲಯದ ಮುಂದೆ ಹಾಜರಾಗಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕಳೆದ ವರ್ಷ ಫೆಬ್ರವರಿ 5 ರಂದು ಕಾಪುವಿನ ಪಾಂಗಾಳದಲ್ಲಿ ಡ್ರ್ಯಾಗನ್ ಇರಿತಕ್ಕೊಳಗಾಗಿ ಪಾಂಗಾಳ ಮಂಡೇಡಿಯ ಶರತ್ ಶೆಟ್ಟಿ ಕೊಲೆಯಾಗಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ಯೋಗೇಶ್ ಈಗ ನ್ಯಾಯಾಲಯದ ಮುಂದೆ ಹಾಜರಾಗಿದ್ದಾನೆ.
ಶರತ್ ಕೊಲೆ ನಂತರ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದರು. ಆರೋಪಿ ಪತ್ತೆ ಆಗಿರಲಿಲ್ಲ. ಕೊನೆಗೆ ಮನೆಯವರು ಕುಟುಂಬದ ದೈವದ ಮೊರೆ ಹೋಗಿದ್ದರು. ಆಗ ಅಭಯ ನೀಡಿ ಪಾತಾಳದಲ್ಲಿ ಅಡಗಿ ಕುಳಿತರು ಹುಡುಕುತ್ತೇನೆ ಎಂದು ಪಂಜುರ್ಲಿ ದೈವ ನುಡಿದಿತ್ತು. ಕೊಲೆ ನಡೆದು 15 ತಿಂಗಳು ಕಳೆದಿವೆ. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಸಾಕಷ್ಟು ಪ್ರಯತ್ನ ನಡೆಸಿದ್ದರೂ ಫಲಕಾರಿಯಾಗಿರಲಿಲ್ಲ. ಆದರೆ ಇದೀಗ ತಡವಾದರೂ ದೈವದ ಮಾತು ನಿಜವಾಗಿದೆ.
ತುಳುನಾಡಿನ ದೈವದ ಸತ್ಯಗಳು ಇನ್ನೂ ಪವಾಡ ತೋರಿಸುತ್ತಿವೆ ಎಂದು ಜನ ಬಲವಾಗಿ ನಂಬಿದ್ದು ಇದೀಗ ಈ ಘಟನೆ ಪ್ರತ್ಯಕ್ಷ ಸಾಕ್ಷಿ ಒದಗಿಸುವಂತಿದೆ.