ಬೆಂಗಳೂರು :
2017ರ ಚಿಕ್ಕಮಗಳೂರಿನ ದತ್ತಪೀಠ ಗೋರಿ ಒಡೆದಿದ್ದ ಪ್ರಕರಣವನ್ನು ರಾಜ್ಯ ಸರ್ಕಾರ ಮತ್ತೆ ಓಪನ್ ಮಾಡಿದ್ದು, ಈ ಕುರಿತಂತೆ 14 ಜನರನ್ನು ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿದೆ. ಹುಬ್ಬಳ್ಳಿಯ ಕರಸೇವಕರು ಎನ್ನಲಾದವರ ಪ್ರಕರಣವನ್ನು ಮರು ಕೈಗೆತ್ತಿಕೊಂಡ ಬೆನ್ನಲ್ಲೇ ಇದೀಗ ದತ್ತ ಪೀಠ ಹೋರಾಟಗಾರರ ಮೇಲಿನ ಕೇಸ್ ಅನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಜ.8 ಕೋರ್ಟ್‌ಗೆ ಹಾಜರಾಗುವಂತೆ ಸೂಚನೆ ನೀಡಿದೆ. ಇನ್ನು ಬಿಜೆಪಿಯಿಂದ ಮತ್ತೇ ಹೋರಾಟ ಮುಂದುವರಿಸುವ ಮುನ್ಸೂಚನೆ ಇದೆ ಎನ್ನಲಾಗುತ್ತಿದೆ.

ಸಿಎಂ ಮಾಧ್ಯಮ ಸ್ಪಷ್ಟನೆ :
ಕೆಲವು ದೃಶ್ಯ ಮಾಧ್ಯಮಗಳಲ್ಲಿ ಬಾಬಾಬುಡನ್ ಗಿರಿಯಲ್ಲಿ ಗೋರಿ ಧ್ವಂಸ ಪ್ರಕರಣವನ್ನು ರೀ ಓಪನ್ ಮಾಡಲಾಗಿದೆ ಎನ್ನುವ ಸುದ್ದಿ ಪ್ರಸಾರವಾಗುತ್ತಿದ್ದು ಇದು ಅಪ್ಪಟ ತಪ್ಪು ಮಾಹಿತಿ ಹಾಗೂ ಸುಳ್ಳಿನಿಂದ ಕೂಡಿದ್ದಾಗಿದೆ ಎಂದು ಸಿಎಂ ಮಾಧ್ಯಮ ವಿಭಾಗ ಸ್ಪಷ್ಟನೆ ನೀಡಿದೆ.

2017 ರಲ್ಲಿ ದಾಖಲಾಗಿದ್ದ ಪ್ರಕರಣದ ಸಹಜ ಕಾನೂನು ಪ್ರಕ್ರಿಯೆಯ ಭಾಗವಾಗಿ ಆರೋಪಿಗಳಿಗೆ ನ್ಯಾಯಾಲಯದ ಸಮನ್ಸ್ ಜಾರಿ ಆಗಿದೆ ಅಷ್ಟೆ.

2017 ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ 2020 ರ ಮಾರ್ಚ್ 19 ರಂದು ವಿಚಾರಣೆಗೆ ಅನುಮತಿಗಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅದರ ಆಧಾರದಲ್ಲಿ 2023 ರ ಸೆಪ್ಟೆಂಬರ್ 7 ರಂದು ಸರ್ಕಾರ ಅನುಮತಿ ನೀಡಿತ್ತು.

2023 ರ ಅಕ್ಟೋಬರ್ 24 ರಂದು ಆರೋಪಿಗಳ ವಿರುದ್ಧ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಬಳಿಕ ಈ ಕಾನೂನು ಪ್ರಕ್ರಿಯೆಯ ಮುಂದುವರೆದ ಭಾಗವಾಗಿ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿದ್ದು ಜನವರಿ 8 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯದಿಂದಲೇ ಸಮನ್ಸ್ ಜಾರಿಯಾಗಿದೆ ಎಂದು ತಿಳಿಸಿದೆ.

ಇದಿಷ್ಟೂ ಕೂಡ ಯಾವುದೇ ಒಂದು ಪ್ರಕರಣದಲ್ಲಿ ಸಹನವಾಗಿ ನಡೆಯುವ ಕಾನೂನು ಪ್ರಕ್ರಿಯೆಯಾಗಿದೆ.

ಆದ್ದರಿಂದ ಪ್ರಕರಣದ ಮರು ತನಿಖೆಗೆ ಸರ್ಕಾರ ಮುಂದಾಗಿದೆ ಎನ್ನುವುದು ತಪ್ಪು ಮತ್ತು ದುರುದ್ದೇಶಪೂರಿತ ಸುಳ್ಳು ಸಂಗತಿಯಾಗಿದೆ ಎಂದು ತಿಳಿಸಿದೆ.